ಕುಖ್ಯಾತ ರೌಡಿ ಕಾರ್ತೀಕ್ ಗಡೀಪಾರು

ಬೆಂಗಳೂರು, ಏ.೨೭-ಮಿತಿ ಮೀರಿದ ಗೂಂಡಾ ವರ್ತನೆ ತೋರುತ್ತಿದ್ದ ಹಲಸೂರು ಪೊಲೀಸ್ ಠಾಣೆಯ ಕುಖ್ಯಾತ ರೌಡಿ ಕಾರ್ತೀಕ್ ಅಲಿಯಾಸ್ ರಾಹುಲ್ ನನ್ನು ನಗರ ಜಿಲ್ಲೆಯಿಂದ ೧ ವರ್ಷ ಗಡಿಪಾರು ಮಾಡಿ ವಿಶೇಷ ಕಾರ್ಯನಿರ್ವಾಹಕ
ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ನಗರದಲ್ಲಿಯೇ ಪ್ರಪ್ರಥಮ ಪ್ರಕರಣ ಇದಾಗಿದ್ದು ಹಲಸೂರಿನ ಗೌತಮಪುರದ ರೌಡಿಶೀಟರ್ ಕಾರ್ತೀಕ್(೩೦) ನನ್ನು ಎ.೨೬ರಿಂದ ಬರುವ ೨೦೨೨ರ ಏ.೨೬ರವರೆಗೆ ಒಂದು ವರ್ಷ ಕಾಲ ಗ್ರಾಮಾಂತರ ಜಿಲ್ಲೆಗೆ ಗಡಿಪಾರು ಮಾಡಿ ಆದೇಶಿಸಲಾಗಿದೆ.
ರೌಡಿ ಕಾರ್ತೀಕ್ ಅತ್ಯಾಚಾರ, ದರೋಡೆ, ಕೊಲೆಗೆ ಯತ್ನ, ಬಲಾತ್ಕಾರದ ವಸೂಲಿ, ಪ್ರಾಣ ಬೆದರಿಕೆ, ಸರ್ಕಾರಿ ನೌಕರರ ಮೇಲೆ ಹಲ್ಲೆ ಹಾಗೂ ಇತರೆ ಗಲಾಟೆ ಪ್ರಕರಣಗಳು ಸೇರಿ ೧೧ ಪ್ರಕರಣಗಳಲ್ಲಿ ಭಾಗಿಯಾಗಿ ಗೂಂಡಾ ವರ್ತನೆಯನ್ನು ಪ್ರದರ್ಶಿಸಿ ಸಾರ್ವಜನಿಕರಿಗೆ ಭಯವನ್ನುಂಟು ಮಾಡಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಕೃತ್ಯಗಳಲ್ಲಿ ತೊಡಗಿದ್ದ.
ಅಪರಾಧ ಕೃತ್ಯಗಳನ್ನು ಯಾವುದೇ ಕಾನೂನಿನ ಭಯವಿಲ್ಲದೇ ಮುಂದುವರೆಸಿಕೊಂಡು ಬಂದಿದ್ದು ಹಲಸೂರು ಪೊಲೀಸ್ ಇನ್ಸ್‌ಪೆಕ್ಟರ್ ಈತನನ್ನು ನಗರ ಜಿಲ್ಲೆಯಿಂದ ಗಡಿಪಾರು ಮಾಡಲು ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಹಲಸೂರು ಉಪ
ವಿಭಾಗದ ಎಸಿಪಿ ಅವರು ಪರಿಶೀಲಿಸಿ ಶಿಫಾರಸ್ಸು ಮಾಡಿರುತ್ತಾರೆ.
ಅದರಂತೆ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಹಾಗೂ ಪೂರ್ವ ವಿಭಾಗದ ಡಿಸಿಪಿ ಡಾ.ಶರಣಪ್ಪ ಅವರು ಗಡಿಪಾರು ಮಾಡಲು ಆದೇಶ ಹೊರಡಿಸಿದ್ದಾರೆ.