ಕುಖ್ಯಾತ ರೌಡಿ‌ ಕ್ರೇಜಿ‌ಗೆ ಗುಂಡಿಕ್ಕಿ ಸೆರೆ

ಬೆಂಗಳೂರು,ಏ.25-ಜೈಲಿನಿಂದ ಜಾಮೀನಿನ ಮೇಲೆ ಕೇವಲ 15ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ಬಂದಿದ್ದ ರೌಡಿ ಅಪ್ಪು ನನ್ನು ಭೀಕರವಾಗಿ ಕೊಲೆಗೈದಿದ್ದ ಕುಖ್ಯಾತ ರೌಡಿ‌ ದಿನೇಶ್ ಅಲಿಯಾಸ್ ಕ್ರೇಜಿ‌ ಕ್ರೂಸಿಗೆ ಅಶೋಕ್‌ನಗರ ಪೊಲೀಸರು ಗುಂಡಿಕ್ಕಿ ಬಂಧಿಸಿದ್ದಾರೆ.
ಪೊಲೀಸರ ಗುಂಡೇಟು ತಗುಲಿ ಕಾಲಿಗೆ ಗಾಯಗೊಂಡಿರುವ ರೌಡಿ‌ ದಿನೇಶ್ ಅಲಿಯಾಸ್ ಕ್ರೇಜಿ‌ ಕ್ರೂಸಿ(22)ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ ಏ. 20 ರಂದು ಜೈಲಿನಿಂದ ಜಾಮೀನಿನ ಮೇಲೆ ಕೇವಲ 15ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ಬಂದಿದ್ದ ರೌಡಿ ಅಪ್ಪು ರೋಸ್ ಗಾರ್ಡನ್ ನ ಸ್ನೇಹಿತನ ಮನೆಗೆ ಬಂದಿದ್ದಾಗ ರೌಡಿ ದಿನೇಶ್ ಸಹಚರರ ಜೊತೆ ಭೀಕರವಾಗಿ ಕೊಲೆ ಮಾಡಿದ್ದರು.
ಪ್ರಕರಣ ದಾಖಲಿಸಿದ ಆಶೋಕನಗರ ಪೊಲೀಸರು ಕಾರ್ಯಾಚರಣೆ ಕೈಗೊಂಡು ರೌಡಿ ದಿನೇಶ್ ನನ್ನು ಬಂಧಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ ಇಂದು ಮಧ್ಯಾಹ್ನ ಮಾರಕಾಸ್ತ್ರ ಜಪ್ತಿಗೆ ಲಾಂಗ್ ಫೋರ್ಡ್ ರಸ್ತೆಯ ಕ್ರಿಶ್ಚಿಯನ್ ಸೆಮೆಟ್ರಿ ಬಳಿ
ತೆರಳಿದ್ದ ವೇಳೆ ರೌಡಿ ದಿನೇಶ್ ಮಾರಕಾಸ್ತ್ರದಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.
ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ಭರತ್‌ ರೌಡಿಶೀಟರ್ ದಿನೇಶ್ ಮೇಲೆ ಗುಂಡು ಹಾರಿಸಿದ್ದಾರೆ.
ಹಲ್ಲೆ ಮಾಡಲು ಪ್ರಯತ್ನಿಸಿದ್ದರಿಂದ ಕಾನ್ಸ್‌ಟೇಬಲ್ ವಸಂತ್‌ ಎಂಬುವವರಿಗೆ ಗಾಯವಾಗಿದೆ.
ಕಾನ್ಸ್‌ಟೇಬಲ್ ವಸಂತ್ ಮತ್ತು ರೌಡಿಶೀಟರ್‌ ದಿನೇಶ್ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.