ಕುಖ್ಯಾತ ರೌಡಿಚೇತು ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗ

ಬೆಂಗಳೂರು,ಜು.೨೦-ಕೊಲೆ, ಸುಲಿಗೆ, ಡಕಾಯಿತಿ, ದರೋಡೆ ಸಂಚು, ಕೊಲೆ ಪ್ರಯತ್ನ, ಜೀವ ಬೆದರಿಕೆ ಇನ್ನಿತರ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿ ಚೇತನ್‌ಕುಮಾರ್ ಅಲಿಯಾಸ್ ಚಿಕ್ಕ ಚೇತು ನನ್ನು ಪೂರ್ವ ವಿಭಾಗದ ಪೊಲೀಸರು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ.
ಬಾಗಲಗುಂಟೆ, ಚಂದ್ರಾಲೇಔಟ್, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಕುಖ್ಯಾತ ರೌಡಿಯಾದ ನಾಗರಬಾವಿಯ ಐಟಿಐ ಬಡಾವಣೆಯ
ಚೇತನ್ ಕುಮಾರ್ ಅಲಿಯಾಸ್ ಚಿಕ್ಕ ಚೇತು(೨೮)ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.
ಶ್ರೀರಾಮಪುರ, ಮಾಗಡಿ, ಪೀಣ್ಯ, ವಿಜಯನಗರ, ಚಂದ್ರಾಲೇಔಟ್, ಅನ್ನಪೂರ್ಣೇಶ್ವರಿನಗರ, ಮಾದನಾಯಕನಹಳ್ಳಿ, ಬಾಗಲಗುಂಟೆ ಮತ್ತು ಸೋಲದೇವನಹಳ್ಳಿಯಲ್ಲಿ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಚಿಕ್ಕ ಚೇತು ವಿರುದ್ಧ ಕೊಲೆ, ಸುಲಿಗೆ, ಡಕಾಯಿತಿ, ದರೋಡೆ ಸಂಚು, ಕೊಲೆ ಪ್ರಯತ್ನ, ಜೀವ ಬೆದರಿಕೆ, ಹಲ್ಲೆಯಂತಹ ಅಪರಾಧ ಪ್ರಕರಣಗಳು ದಾಖಲಾಗಿವೆ.
ಚಿಕ್ಕ ಚೇತು ೨೦೧೨ ರಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು,ಸುಮಾರು ೧೦ ವರ್ಷಗಳ ಕಾಲ ಕೊಲೆ, ಸುಲಿಗೆ, ಡಕಾಯಿತಿ, ದರೋಡೆ ಸಂಚು, ಕೊಲೆ ಪ್ರಯತ್ನ, ಜೀವ ಬೆದರಿಕೆ, ಹಲ್ಲೆಯಂತಹ ೧೦ ಕೃತ್ಯಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಸೋಲದೇವನಹಳ್ಳಿ ಕೊಲೆ ಯತ್ನ ಪ್ರಕರಣದ ಸಂಬಂಧ ಕಳೆದ ಮಾರ್ಚ್ ನಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ತಕ್ಷಣವೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ.
ನ್ಯಾಯಾಲಯದ ಜಾಮೀನಿನ ಷರತ್ತುಗಳನ್ನು ಉಲ್ಲಂಘನೆ ಮಾಡಿ ನ್ಯಾಯಾಲಯದ ವಿಚಾರಣೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡು ರೌಡಿ ಚಟುವಟಿಕೆ ಹಾಗೂ ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿ ಸಾರ್ವಜನಿಕರಲ್ಲಿ ಭಯ ಭೀತಿಯನ್ನುಂಟು ಮಾಡುತ್ತಿದ್ದರಿಂದ ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ.