ಕುಖ್ಯಾತ ಮನೆ ಕಳ್ಳತನ ಆರೋಪಿಗಳ ಬಂಧನ : 75,00,000 ರೂ. ಮೌಲ್ಯದ ಚಿನ್ನಾಭರಣ ವಶ

ಮೈಸೂರು,ನ.9:- ಮೈಸೂರು ನಗರದಲ್ಲಿ ಇತ್ತೀಚೆಗೆ ಮನೆಗಳ್ಳತನ ವರದಿಯಾಗುತ್ತಿದ್ದ ಹಿನ್ನಲೆಯಲ್ಲಿ ಈ ಪ್ರಕರಣಗಳ ಪತ್ತೆ ಸಂಬಂಧ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಸಿ.ಸಿ.ಬಿ.ಘಟಕದ ಎ.ಸಿ.ಪಿ. ವಿ.ಮರಿಯಪ್ಪ ಅವರ ನೇತೃತ್ವದಲ್ಲಿ ಪೊಲೀಸ್ ಇನ್ಸಪೆಕ್ಟರ್ ಆರ್. ಜಗದೀಶ್ ಮತ್ತು ಸಿಬ್ಬಂದಿಗಳಿದ್ದ ವಿಶೇಷ ತಂಡವನ್ನು ರಚಿಸಿದ್ದು ಈ ವಿಶೇಷ ತಂಡವು ಮೈಸೂರು ನಗರದ ಅಶೋಕ ರಸ್ತೆಯಲ್ಲಿರುವ ಜ್ಯುವೆಲ್ಲರಿ ಅಂಗಡಿ ಬಳಿ ವ್ಯಕ್ತಿಗಳಿಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ನೆಲಮಂಗಲ ಬೈ ಆರ್.ಎಂ.ಸಿ.ಯಾರ್ಡ್ 2ನೇ ಕ್ರಾಸ್ ನಿವಾಸಿ ಲಿಂಗರಾಜು @ ಲಿಂಗ @ ಸೈಯದ್ ಶಾಹೀದ್@ ಚುಲ್ಲಾ ಬಿನ್ ಲೇಟ್ ಮನಿಯಪ್ಪ (38), ಹುಬ್ಬಳ್ಳಿ ಪಂಚಾಕ್ಷರಿ ನಗರ ನಂ. 7, “ರೇಣುಕಾ ನಿಲಯ, ಎಲ್ಲಪ್ಪ ರೇವಪ್ಪ ಚೊತ್ತಪ್ಪನವರ ಮನೆ ನಿವಾಸಿ ಸೈಯದ್ ನವಾಬ್ @ ನವಾಬ್ @ ರಾಜು @ ರಾಜಿ ಬಿನ್ ಲೇಟ್ ಸೈಯದ್ ಜಾನಿ ( 40) ಎಂದು ಗುರುತಿಸಲಾಗಿದ್ದು, ಇವರನ್ನು ವಶಕ್ಕೆ ಪಡೆದು ಸ್ಥಳದಲ್ಲಿ ಅವರನ್ನು ಪರಿಶೀಲಿಸಿದಾಗ ಆರೋಪಿ ಲಿಂಗ ರಾಜು @ ಲಿಂಗ @ ಸೈಯದ್ ಶಾಹೀದ್ನ ವಶದಲ್ಲಿ ಒಂದು ಚಿನ್ನದ ಕಾಸಿನ ಸರವಿದ್ದು, ಹಿಂದೂಗಳು ಧರಿಸುವ ಚಿನ್ನದ ಆಭರಣವಾದ್ದರಿಂದ ಅನುಮಾನ ಬಂದು ಸಿ.ಸಿ.ಬಿ. ಘಟಕಕ್ಕೆ ಕರೆದುಕೊಂಡು ಬಂದು ಅವರುಗಳನ್ನು ಕೂಲಂಕುಷವಾಗಿ ವಿಚಾರಣೆಗೊಳಪಡಿಸಲಾಗಿ ಈ ಇಬ್ಬರು ಆರೋಪಿಗಳು ಸೇರಿಕೊಂಡು ಇದೇ ವರ್ಷದ ಜುಲೈ ತಿಂಗಳ ಕೊನೆಯ ದಿವಸ ಮೈಸೂರು ನಗರ ಸರಸ್ವತಿಪುರಂ ಠಾಣಾ ಸರಹದ್ದಿನ ಸರಸ್ವತಿಪುರಂ 7ನೇ ಮೈನ್, 5ನೇ ಕ್ರಾಸ್ ಮನೆಯೊಂದರಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿದ್ದು, 2018ನೇ ಇಸವಿ ನವೆಂಬರ್ ತಿಂಗಳಿನಲ್ಲಿ ಮೈಸೂರು ನಗರದ ಬನ್ನಿಮಂಟಪದಲ್ಲಿ ಒಂದು ಮನೆಯೊಳಗೆ ಇಟ್ಟಿದ್ದ ಒಂದು ಪರ್ಸ್ನೊಳಗಿದ್ದ ಚಿನ್ನದ ಬಳೆಗಳನ್ನು ಆರೋಪಿ ಸೈಯದ್ ನವಾಬ್ ಕಳವು ಮಾಡಿರುವುದಾಗಿ ತಿಳಿಸಿದ್ದಾರೆ. ಇವರನ್ನು ನ.2ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ, ನಂತರ ಪೊಲೀಸ್ ವಶಕ್ಕೆ ನೀಡಲಾಗಿದೆ.
ಆರೋಪಿಗಳು ಕಳುವು ಮಾಡಿದ್ದ ಚಿನ್ನಾಭರಣಗಳನ್ನು ಹುಬ್ಬಳ್ಳಿ, ತುಮಕೂರು, ಬೆಂಗಳೂರು, ಮೈಸೂರು ನಗರದಲ್ಲಿ ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿದ್ದು, ಈ ಸ್ಥಳಗಳಿಂದ 02 ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ಸುಮಾರು 75,00,000ರೂ. 1 ಕೆ.ಜಿ. 439 ಗ್ರಾಂ ತೂಕದ ಚಿನ್ನಾಭರಣಗಳನ್ನು ಅಮಾನತುಪಡಿಸಿಕೊಂಡಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ. (ಕಾನೂನು ಮತ್ತು ಸುವ್ಯವಸ್ಥೆ) ಡಾ.ಎ.ಎನ್. ಪ್ರಕಾಶಗೌಡ, ಡಿ.ಸಿ.ಪಿ. (ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ) ಎಂ.ಎಸ್.ಗೀತಪ್ರಸನ್ನ ಅವರ ಮಾರ್ಗದರ್ಶನದಲ್ಲಿ, ಎ.ಸಿ.ಪಿ. ವಿ.ಮರಿಯಪ್ಪ ಅವರ ನೇತೃತ್ವದಲ್ಲಿ ಸಿ.ಸಿ.ಬಿ.ಯ ಇನ್ಸಪೆಕ್ಟರ್ ಆರ್. ಜಗದೀಶ್, ಎ.ಎಸ್.ಐ.ಗಳಾದ ಯು. ಉಮೇಶ್, ಡಿ.ಜಿ. ಚಂದ್ರೇ ಗೌಡ, ಅಲೆಕ್ಸಾಂಡರ್, ಸಿಬ್ಬಂದಿಗಳಾದ ರಾಮಸ್ವಾಮಿ, ಚಿಕ್ಕಣ್ಣ, ಪರಮೇಶ, ಶಿವರಾಜು, ಲಕ್ಷ್ಮಿಕಾಂತ, ಗಣೇಶ್.ಎಂ.ಆರ್. ಯಾಕೂಬ್ ಷರೀಪ್, ಸಲೀಂ ಪಾಷ, ಶ್ರೀನಿವಾಸ ಪ್ರಸಾದ್, ಆನಂದ್, ಅನಿಲ್, ಚಂದ್ರಶೇಖರ್, ಸಿ.ಎಂ.ಮಂಜು, ಕುಮಾರ್ ಮಹಿಳಾ ಸಿಬ್ಬಂದಿ ರಾಜಶ್ರೀ ಜಾಲವಾದಿ, ಗೌತಮ್, ಸೋಮು ತಾಂತ್ರಿಕ ಕೋಶದ ಪೊಲೀಸ್ ಇನ್ಸಪೆಕ್ಟರ್ ಲೋಲಾಕ್ಷಿ. ಟಿ.ಎಸ್. ಸಿಬ್ಬಂದಿಗಳಾದ ಗುರುದೇವಾರಾಧ್ಯ, ಮಂಜು.ಸಿ.ಎಂ, ಶ್ಯಾಂ ಸುಂದರ್, ಕುಮಾರ್. ಪಿ ಮಾಡಿರುತ್ತಾರೆ.