ಕುಖ್ಯಾತ ಬೈಕ್ ಕಳ್ಳ ಡಾಲಿ ಸೆರೆ; 42 ವಾಹನಗಳ ವಶ

ಬೆಂಗಳೂರು,ನ.೨೨- ವಾಹನ ಕಳ್ಳತನವನ್ನು ವೃತ್ತಿಯಾಗಿಸಿಕೊಂಡಿದ್ದ ಕುಖ್ಯಾತ ಕಳ್ಳನನ್ನು ಬಂಧಿಸಿರುವ ಮಹದೇವಪುರ ಪೊಲೀಸರು ೨೫ ಲಕ್ಷ ಮೌಲ್ಯದ ೪೨ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಅತ್ತಿಬೆಲೆಯ ಬಿದರಗುಪ್ಪೆ ಗ್ರಾಮದ ಪ್ರಶಾಂತ್ ಅಲಿಯಾಸ್ ಡಾಲಿ (೨೫) ಬಂಧಿತ ಆರೋಪಿಯಾಗಿದ್ದು, ಆತನಿಂದ ವಿವಿಧ ಕಂಪನಿಯ ೨೫ ಲಕ್ಷ ಮೌಲ್ಯದ ೪೨ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.
ಆರೋಪಿಯ ಬಂಧನದಿಂದ ವೈಟ್‌ಫೀಲ್ಡ್, ಕೆಆರ್‌ಪುರಂನ ತಲಾ ೩, ಮಹದೇವಪುರ, ಸರ್ಜಾಪುರದ ತಲಾ ೨, ತುಮಕೂರು, ಡಾಬಸ್‌ಪೇಟೆ ತಲಾ ೧ ಸೇರಿದಂತೆ ೧೨ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಯು ಕಳೆದ ನ. ೭ ರಂದು ರಾತ್ರಿ ಮಹದೇವಪುರದ ಆರ್‌ಹೆಚ್‌ಬಿ ಕಾಲೋನಿ ಬಳಿ ಮನೋಹರ್ ಎಂಬುವರು ನಿಲ್ಲಿಸಿದ್ದ ಬೈಕ್‌ನ್ನು ಕಳವು ಮಾಡಿದ ಪ್ರಕರಣ ದಾಖಲಿಸಿದ ಇನ್ಸ್‌ಪೆಕ್ಟರ್ ಪ್ರಶಾಂತ್ ವರಣಿ ಮತ್ತವರ ತಂಡ ಖಚಿತ ಮಾಹಿತಿಯಾಧರಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಯು ಹಲವು ದಿನಗಳಿಂದ ದ್ವಿಚಕ್ರ ವಾಹನ ಕಳ್ಳತನವನ್ನು ವೃತ್ತಿಯಾಗಿಸಿಕೊಂಡಿದ್ದು, ಕಳವು ಮಾಡಿದ ವಾಹನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಮೋಜಿನ ಜೀವನ ನಡೆಸುತ್ತಿದ್ದ ಎಂದು ತಿಳಿಸಿದರು.