ಕುಖ್ಯಾತ ಖದೀಮನ ಬಂಧನ: ೧೦ ಲಕ್ಷ ರೂ. ಬೆಲೆಯ ಮಾಲು ವಶ

ಅರಸೀಕೆರೆ, ಆ. ೧೭- ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮನೋರ್ವನನ್ನು ಪತ್ತೆಹಚ್ಚಿ ಬಂಧಿಸಿರುವ ಇಲ್ಲಿನ ಪೊಲೀಸರು ಸುಮಾರು ೧೦ ಲಕ್ಷ ರೂ. ಮೌಲ್ಯದ ಕಳವು ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಮಟ್ಟನವಿಲೆ ಮಂಜುನಾಥ ಅಲಿಯಾಸ್ ಮಂಜ ಎಂಬಾತನೇ ಬಂಧಿತ ಆರೋಪಿ. ಈತ ಬೆಂಗಳೂರು ನಗರದ ಪೀಣ್ಯಾ ಪೊಲೀಸ್ ಸರಹದ್ದಿನಲ್ಲಿ ಇಂಡಿಕಾ ಕಾರು, ಒಂದು ಸ್ವಿಫ್ಟ್ ಕಾರು, ಪಲ್ಸರ್ ಬೈಕ್ ಹಾಗೂ ಬಾಗಲಗುಂಟೆ ಪೊಲೀಸ್ ಠಾಣೆ ಸರಹದ್ದಿನಲ್ಲಿ ಒಂದು ಕರಿಷ್ಮಾ ಬೈಕ್, ೧ ಎಂಎಲ್ಡ್ ಬುಲೆಟ್ ಬೈಕ್, ರಾಮನಗರ ಜಿಲ್ಲೆ ಬಿಡದಿ ಸರಹದ್ದಿನಲ್ಲಿ ಒಂದು ಸ್ಪ್ಲೆಂಡರ್ ಬೈಕ್ ಮತ್ತು ಅರಸೀಕೆರೆ ನಗರ ಠಾಣೆಯ ಸರಹದ್ದಿನಲ್ಲಿ ಒಂದು ಅಪೆ ಗೂಡ್ಸ್ ಆಟೋ , ಒಂದು ಸ್ಪ್ಲೆಂಡರ್ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಸದರಿ ಆರೋಪಿಯಿಂದ ಒಟ್ಟು ಸುಮಾರು ಹತ್ತು ಲಕ್ಷ ರೂ. ಮೌಲ್ಯದ ಎರಡು ಕಾರುಗಳು, ಒಂದು ಆಟೋ ೫ ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಡಿವೈಎಸ್ಪಿ ನಾಗೇಶ್ ಅವರು, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀನಿವಾಸಗೌಡ ಅವರು ತಮ್ಮ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದರು. ತಂಡದಲ್ಲಿ ನಗರಠಾಣೆ ನಿರೀಕ್ಷಕ ಸೋಮೇಗೌಡ ಪಿಎಸ್‌ಐ ತಿಮ್ಮಯ್ಯ ಹಾಗೂ ಸಿಬ್ಬಂದಿಗಳಾದ ಮಂಜೇಗೌಡ, ರಂಗಸ್ವಾಮಿ, ಕುಮಾರ್ ಸಂಗಪ್ಪ, ರಮೇಶ್, ಶುಭ ಹಾಗೂ ಜೀಪ್ ಚಾಲಕ ನಾಗರಾಜ್ ಅವರುಗಳು ಕಾರ್ಯಪ್ರವೃತ್ತರಾಗಿ ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಆರ್.ಆರ್. ಹೋಟೆಲ್ ಸಮೀಪ ಮೋಟಾರ್ ಬೈಕ್‌ನ್ನು ನಿಲ್ಲಿಸಿಕೊಂಡು ಸ್ಟಾರ್ಟ್ ಮಾಡಲಾಗದೆ, ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ಆಗ ಪೊಲೀಸರ ತಂಡ ಆತನನ್ನು ಬೈಕ್ ಸಮೇತ ಹಿಡಿದು ತಂದಿದ್ದರು ಎಂದು ಹೇಳಿದರು.