ಕುಖ್ಯಾತ ಕಳ್ಳ ಸೂಪ್ ಸೂರಿ ಸೆರೆ

ಬೆಂಗಳೂರು,ನ.೨೬-ಏಳೆಂಟು ಬಾರಿ ಜೈಲಿಗೆ ಹೋಗಿ ಬಂದರೂ ಬುದ್ದಿ ಕಲಿಯದೇ ಬೀಗ ಹಾಕಿದ ಮನೆಗಳನ್ನು ಗುರಿತಿಸಿ ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಬಂಧಿಸಿರುವ ಬ್ಯಾಡರಹಳ್ಳಿ ಪೊಲೀಸರು ೨೮ ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಪೀಣ್ಯದ ದೊಡ್ಡಹಟ್ಟಿಯ ಸುರೇಶ್ ಅಲಿಯಾಸ್ ಸೂಪ್ ಸೂರಿ(೪೭)ಬಂಧಿತ ಆರೋಪಿಯಾಗಿದ್ದಾನೆ ಎಂದು ಡಿಸಿಪಿ ಡಾ. ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಬಂಧಿತ ಆರೋಪಿಯಿಂದ ೨೮ ಲಕ್ಷ ಮೌಲ್ಯದ ೫೩೪ ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ೨ ಕೆಜಿ ೯೫೦ ಗ್ರಾಂ ತೂಕದ ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
ಆರೋಪಿಯು ಮನೆಯಲ್ಲಿ ಯಾರೂ ಇಲ್ಲದಿರುವುದನ್ನ ಗಮನಿಸಿ ರಾತ್ರಿ ವೇಳೆ ಮನೆಗೆ ರಾಡ್‌ನಿಂದ ಬಾಗಿಲು ಮುರಿದು ದೋಚುತ್ತಿದ್ದು ಕಳೆದ ಸೆ.೪ ರಂದು ರಾತ್ರಿ ಗಂಟೆಗೆ ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಸ್ವಂತ ಊರಿಗೆ ಹೋಗಿದ್ದ ಬ್ಯಾಡರಹಳ್ಳಿಯ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ಕಳವು ಮಾಡಿದ್ದು ಈ ಸಂಬಂಧ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ಕೈಗೊಂಡ ಬ್ಯಾಡರಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ರವಿಕುಮಾರ್.ಆರ್.ಜಿ ಮತ್ತವರ ಸಿಬ್ಬಂದಿ ಖಚಿತವಾದ ಮಾಹಿತಿಯನ್ನು ಆಧರಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯು ಮನೆ ಅಂಗಳ ಗುಡಿಸದಿರುವ ಹಾಗೂ ದಿನಪತ್ರಿಕೆಗಳು ಹಾಗೆಯೇ ಬಿದ್ದಿರುವ ಮನೆಗಳನ್ನೇ ಹೆಚ್ಚಾಗಿ ಗುರಿಯಾಗಿಸಿಕೊಂಡಿದ್ದ ಕಳವು ಮಾಡಿ ಪರಾರಿಯಾಗುತ್ತಿದ್ದು ಈತನ ವಿರುದ್ಧ ಮಾಗಡಿ, ರಾಜಗೋಪಾಲನಗರ, ಬ್ಯಾಡರಹಳ್ಳಿ ಸೇರಿ ಹಲವೆಡೆ ೮ ಮನೆಗಳ್ಳತನ ಪ್ರಕರಣಗಳು ದಾಖಲಾಗಿವೆ.ಹಿಂದೆ ಸುಮಾರು ೧೨ಕ್ಕೂ ಹೆಚ್ಚು ಕಳವು ಪ್ರಕರಣಗಳಲ್ಲಿ ಎಳೆಂಟು ಬಾರಿ ಜೈಲಿಗೆ ಹೋಗಿ ಬಂದಿದ್ದ ಎಂದರು.