ಕುಖ್ಯಾತ ಕನ್ನಗಳ್ಳರ ಸೆರೆ೨ ಕೆ.ಜಿ ಚಿನ್ನಾಭರಣ ಜಪ್ತಿ

ಬೆಂಗಳೂರು, ಏ.೧೩-ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಕನ್ನ ಕಳವು ಮಾಡುತ್ತಿದ್ದ ಮಹಿಳೆ ಸೇರಿ ಮೂವರು ಕುಖ್ಯಾತ ಕನ್ನಗಳ್ಳರನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಸಿಸಿಬಿ ಪೊಲೀಸರು ೧ ಕೋಟಿ ಮೌಲ್ಯದ ೨ ಕೆ.ಜಿ ಚಿನ್ನಾಭರಣಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಗುಜರಾತ್ ಹಾಗೂ ತಮಿಳುನಾಡಿನಿಂದ ನಗರಕ್ಕೆ ಬಂದು ನಗರದ ವಿವಿಧ ಕಡೆಗಳಲ್ಲಿ ಸಹಚರರೊಂದಿಗೆ ಸೇರಿ ಹಗಲು ಮತ್ತು ರಾತ್ರಿ ವೇಳೆ ಬೀಗ ಹಾಕಿರುವ ಮನೆಗಳನ್ನು ಗುರ್ತಿಸಿ ಹಗಲು ಮತ್ತು ರಾತ್ರಿ ವೇಳೆಯಲ್ಲಿ ತನ್ನ ಸಹಚರರೊಂದಿಗೆ ಸೇರಿಕೊಂಡು ಕನ್ನ ಕಳವು ಮಾಡುತ್ತಿದ್ದ ಮೂವರು ಕನ್ನಗಳ್ಳರ ಬಂಧನದಿಂದ ೧೫ ಮನೆಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ತಮಿಳುನಾಡಿನ ಜಯಂತಿ(೩೨)ಗುಜರಾತ್ ನ ಮುಜುಬಾಯಿ ಅಲಿಯಾಸ್ ದಂಗಲ್ ಸಿಂಗ್ (೩೦)ಹಾಗೂ ನಗರದ ಅಮ್ಜದ್ (೩೬) ಬಂಧಿತ ಆರೋಪಿಗಳಾಗಿದ್ದು,ಬಂಧಿತರಿಂದ ೨ ಕೆ ಜಿ ತೂಕದ ವಿವಿಧ ವಿನ್ಯಾಸದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಬಂಧಿತ ಜಯಂತಿ ೨೦೧೬ ರಿಂದ ಹೆಬ್ಬಾಳ, ಆರ್.ಟಿ ನಗರ,ಬಾಣಸವಾಡಿ ಹಾಗೂ ತಮಿಳುನಾಡಿನ ಸೈದಾ ಪಟ್ಟಣ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಳ್ಳತನ ಮಾಡಿ ಜೈಲಿಗೆ ಹೋಗಿ ಬಂದಿದ್ದರೂ ಬುದ್ಧಿ ಕಲಿಯದೇ ಚಾಳಿಯನ್ನು ಮುಂದುವರೆಸಿಕೊಂಡು ಹೋಗಿದ್ದಳು.
ಆರೋಪಿಯು ಹಗಲು ವೇಳೆಯಲ್ಲಿ ಮನೆ ಕೆಲಸ ಮಾಡುವ ರೀತಿಯಲ್ಲಿ ತನ್ನ ಚಿಕ್ಕ ಮಗುವಿನೊಂದಿಗೆ ಸುತ್ತಾಡುತ್ತಾ ಬೀಗ ಹಾಕಿರುವ ಮನೆಯನ್ನು ಗುರ್ತಿಸಿ ಮನೆಗಳ ಬೀಗವನ್ನು ಮುರಿದು ಕಳವು ಮಾಡಿದ್ದಳು. ಈಕೆಯು ಕಳವು ಮಾಡಿದ ಜಾಗದಲ್ಲಿ ಬೆರಳು ಮುದ್ರೆ ಪತ್ತೆಯಾಗಿದ್ದು ಈಕೆಯ ಪತ್ತೆಗಾಗಿ ಸಿಸಿಬಿ ಪೊಲೀಸರ ತಂಡ ರಚಿಸಿ ತಮಿಳುನಾಡಿನಲ್ಲಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ.ಬಂಧಿತರಿಂದ ಕಳ್ಳತನ ಮಾಡಿದ ೩೫೦ ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿ ೫ ಕೇಸ್ ಗಳು ಪತ್ತೆಯಾಗಿವೆ.
ಮತ್ತೊಬ್ಬ ಆರೋಪಿ ಆಮ್ಜದ್ ೨೦೧೨ನೇ ಇಸವಿಯಲ್ಲಿ ಬಾಗಲೂರಿನಲ್ಲಿ ಜೋಡಿ ಕೊಲೆಯಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಹೋಗಿ ಬಂದ ಮೇಲೆ ಕಳ್ಳತನ, ಸುಲಿಗೆ, ಡಕಾಯಿತಿ ಪ್ರಕರಣಗಳಲ್ಲಿ ಭಾಗಿಯಾಗಿ ೨೦೧೮ನೇ ಇಸವಿಯಲ್ಲಿ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಡಕಾಯಿತಿ ಕೇಸಿನಲ್ಲಿ ಜೈಲಿಗೆ ಹೋಗಿ ಬಂದಿರುತ್ತಾನೆ.
ಅಲ್ಲಿಂದ ಜಾಮೀನಿನ ಮೇಲೆ ಹೊರಬಂದು ದುಂದು ವೆಚ್ಚಕ್ಕೆ ಹಣ ಹೊಂದಿಸಲು ಕಳ್ಳತನಕ್ಕೆ ಮುಂದಾಗಿ ಹಗಲು ವೇಳೆಯಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರ್ತಿಸಿಕೊಂಡು ರಾತ್ರಿಯಾದ ನಂತರ ಆರೋಪಿಯು ಮನೆಗಳ ಬೀಗವನ್ನು ಮುರಿದು ಮನೆಯಲ್ಲಿ ಇಟ್ಟಿದ್ದ ಚಿನ್ನದ ಒಡವಗಳನ್ನು ಕಳವು ಮಾಡಿರುತ್ತಾನೆ. ಈತನ ಮಾಹಿತಿ ಮೇರೆಗೆ ಒಟ್ಟು ೬೫೦ ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡು ೮ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.
ಚಡ್ಡಿ ಗ್ಯಾಂಗ್ :
ಮೂರನೇ ಆರೋಪಿ ಗುಜರಾತ್ ನ ದಂಗಲ್ ಸಿಂಗ್ ತನ್ನ ಅಣ್ಣ ಹಾಗು ಇಬ್ಬರು ಸ್ನೇಹಿತರೊಂದಿಗೆ ಸೇರಿಕೊಂಡು ಚಡ್ಡಿ ಗ್ಯಾಂಗ್ ಕಟ್ಟಿಕೊಂಡು ಈ ಹಿಂದೆ ತಮಿಳುನಾಡು ಮತ್ತು ಕರ್ನಾಟಕದಲ್ಲಿ ತನ್ನ ಸಹಚರರೊಂದಿಗೆ ಕಳವು ಮಾಡುತ್ತಿದ್ದ.
ಸಹಚರರೊಂದಿಗೆ ಗುಜರಾತ್ ನಿಂದ ರೈಲಿನಲ್ಲಿ ಯಶವಂತಪುರಕ್ಕೆ ಬಂದು ರೈಲ್ವೇ ಸ್ಟೇಷನ್‌ನಲ್ಲಿ ಉಳಿದುಕೊಂಡು ಹಗಲು ವೇಳೆಯಲ್ಲಿ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣ ಮಾಡಿ ಬೀಗ ಹಾಕಿರುವ ಹಾಗೂ ಒಂಟಿ ಮನೆಗಳನ್ನು ಗುರ್ತಿಸಿ ಮನೆಯಿಂದ ಸ್ವಲ್ಪ ದೂರದಲ್ಲಿ ಉಳಿದುಕೊಂಡು ರಾತ್ರಿಯಾಗುತ್ತಿದ್ದಂತೆ ಮನೆಗೆ ಯಾರೂ ಬಾರದೆ ಇದ್ದರೆ ಮನೆಯ ಡೋರ್ ಲಾಕ್ ಅನ್ನು ಮುರಿದು ಮನೆಯಲ್ಲಿ ಇಟ್ಟಿದ್ದ ಚಿನ್ನದ ಒಡವೆ, ನಗದು ಹಣ, ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿ ಆ ಮನೆಯಿಂದ ಸ್ವಲ್ಪ ದೂರದಲ್ಲಿ ಆರೋಪಿಗಳು ಕದ್ದ ಮಾಲನ್ನು ಮಣ್ಣಿನಲ್ಲಿ ಹೂತ್ತಿಟ್ಟು ಮತ್ತೆ ಯಶವಂತಪುರ ರೈಲ್ವೇ ಸ್ಟೇಷನ್‌ಗೆ ಬಂದು ಅಲ್ಲೇ ಉಳಿದುಕೊಳ್ಳುತ್ತಾರೆ.
ವರ್ಷಗಳಿಂದ ಕಳವು:
ಇದೇ ರೀತಿ ಎರಡ ರಿಂದ ಮೂರು ಮನೆಗಳನ್ನು ಕಳ್ಳತನ ಮಾಡಿ ಕಳ್ಳತನ ಮಾಡಿದ ಚಿನ್ನದ ಒಡವೆಗಳನ್ನು, ನಗದು ಹಣವನ್ನು ಮತ್ತು ಬೆಳ್ಳಿಯ ಆಭರಣಗಳನ್ನು ತಮ್ಮ ಊರಿನಲ್ಲಿ ಮಾರಾಟ ಮಾಡಿರುತ್ತಾರೆ. ಆರೋಪಿಗಳು ಸುಮಾರು ವರ್ಷಗಳಿಂದ ನಗರದಲ್ಲಿ ಹಲವಾರು ಕಡೆ ಕಳ್ಳತನ ಮಾಡಿದ್ದು ೧ ಕೆ.ಜಿ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡು ೨ ಪ್ರಕರಣಗಳು ಪತ್ತೆಮಾಡಲಾಗಿದೆ ಎಂದರು.
ಪತ್ತೆ ಕಾರ್ಯವನ್ನು ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಹಜರೇಷ್ ಕಿಲ್ಲೇದಾರ್ ಮತ್ತವರ ತಂಡದವರು ನಡೆಸಿದ್ದು ತಂಡವನ್ನು ಅಭಿನಂದಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಡಾ. ಎಸ್.ಡಿ.ಶರಣಪ್ಪ ಡಿಸಿಪಿ ಯತೀಶ್ ಚಂದ್ರ ಅವರಿದ್ದರು.