ಕುಖ್ಯಾತ ಕನ್ನಗಳ್ಳನ ಸೆರೆ 7 ಲಕ್ಷ ಮಾಲು ವಶ

ಬೆಂಗಳೂರು,ನ.೩೦-ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಕುಖ್ಯಾತ ಕನ್ನಗಳ್ಳನನ್ನು ಬಂಧಿಸಿರುವ ಕಲಾಸಿಪಾಳ್ಯ ಪೊಲೀಸರು ೭ ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳಾಸಿಪಾಳ್ಯದ ಮುದಸೀರ್ ಬಂಧಿತ ಆರೋಪಿಯಾಗಿದ್ದಾನೆ.


ಬಂಧಿತನಿಂದ ೫ ಪ್ರಕರಣಗಳಿಗೆ ಸಂಬಂಧಿಸಿದ ಸುಮಾರು ೭ ಲಕ್ಷ ಮೌಲ್ಯದ ೧೮೪ ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ. ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಕಳೆದ ನ.೨೨ ರ ಮುಂಜಾನೆ ೫ರ ವೇಳೆ ವ್ಯಕ್ತಿಯೊಬ್ಬರು ಮಾರ್ಕೆಟ್‌ಗೆ ಬಂದು ಹೂವು ಖರೀದಿಸಿ ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ನಿಂತಿರುವಾಗ ಬ್ಯಾಗಿನಲ್ಲಿಟ್ಟುಕೊಂಡಿದ್ದ ಚಿನ್ನದ ಸರ ಮತ್ತು ನಗದು ಹಣವಿದ್ದ ಪರ್ಸ್ ಅನ್ನು ಆರೋಪಿ ಕಳವು ಮಾಡಿ ಪರಾರಿಯಾಗಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಕಲಾಸಿಪಾಳ್ಯ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಎಲ್. ಚೇತನ್‌ಕುಮಾರ್ ಮತ್ತವರ ಸಿಬ್ಬಂದಿ ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯ ಬಂಧನದಿಂದ ಕಲಾಸಿಪಾಳ್ಯ, ಬಸವೇಶ್ವರನಗರ, ಚಂದ್ರಾ ಲೇಔಟ್, ಕೆಂಪೇಗೌಡ ನಗರ ಠಾಣಾ ವ್ಯಾಪ್ತಿಯ ಕನ್ನಕಳವು, ಮನೆ ಕಳವು ಸೇರಿ ೫ ಪ್ರಕರಣಗಳು ಪತ್ತೆಯಾಗಿವೆ.