ಕುಖ್ಯಾತ ಓಜಿಕುಪ್ಪಂ ಗ್ಯಾಂಗ್‌ನ ಇಬ್ಬರು ಖದೀಮರ ಸೆರೆ

ಬೆಂಗಳೂರು,ಜೂ.೧೬- ನಗರದಲ್ಲಿ ಜನರ ಗಮನ ಬೇರೆಡೆ ಸೆಳೆದು ನಗ-ನಾಣ್ಯ ದೋಚುತ್ತಿದ್ದ ಕುಖ್ಯಾತ ‘ಓಜಿಕುಪ್ಪಂ’ ಗ್ಯಾಂಗ್‌ನ ಇಬ್ಬರು ಖದೀಮರನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಚೆನ್ನೈನ ಕಾರ್ತಿ ಹಾಗೂ ಅಮೋನಾ ದಾಸ್ ಬಂಧಿತ ಆರೋಪಿಗಳಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿ ತಪ್ಪಿಸಿಕೊಂಡಿರುವ ರಾಜ ಅಲಿಯಾಸ್ ಮದನ, ಗೋಪಿ ಹಾಗೂ ವಿದೀಶ್ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ.
ಆರೋಪಿಗಳಿಂದ .೧೩.೯೭ ಲಕ್ಷ ನಗದು, ಎರಡು ಬೈಕ್‌ಗಳು ಹಾಗೂ ಕಾರು ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಕಾರ್ತಿ ಹಾಗೂ ದಾಸ್ ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಇವರ ವಿರುದ್ಧ ಜೆ.ಪಿ.ನಗರ ಹಾಗೂ ಆರ್.ಆರ್.ನಗರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಜನರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುವುದಕ್ಕೆ ತಮಿಳುನಾಡು ಮೂಲದ ‘ಓಜಿಕುಪ್ಪಂ ಗ್ಯಾಂಗ್ ಕುಖ್ಯಾತವಾಗಿದೆ. ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಈ ಗ್ಯಾಂಗ್ ಹಾವಳಿ ಇಟ್ಟಿದೆ. ಈ ತಂಡದ ಸದಸ್ಯರು ಸಣ್ಣ ಸಣ್ಣ ಗುಂಪುಗಳಾಗಿ ರಚಿಸಿಕೊಂಡು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸುತ್ತಾರೆ.
ಬ್ಯಾಂಕ್ ಹಾಗೂ ಸಬ್ ರಿಜಿಸ್ಟ್ರರ್ ಕಚೇರಿಗಳ ಬಳಿ ಸುತ್ತಾಡುತ್ತ ಬ್ಯಾಗ್ ಹಿಡಿದು ಬರುವ ಗ್ರಾಹಕರನ್ನು ಗುರಿಯಾಗಿಸಿ ಕಳ್ಳತನ ಕೃತ್ಯ ಎಸಗುತ್ತಿದ್ದರು. ಅದರಲ್ಲೂ ಸೋಮವಾರ ಹಾಗೂ ಶುಕ್ರವಾರ ದಿನಗಳಲ್ಲಿ ಓಜಿಕುಪ್ಪಂ ಗ್ಯಾಂಗ್ ಹೆಚ್ಚು ಕೃತ್ಯಗಳನ್ನು ಎಸಗಿವೆ. ಆ ಎರಡು ದಿನಗಳನ್ನು ಶುಭ ದಿನಗಳೆಂದು ಭಾವಿಸಿ ಭೂ ನೋಂದಣಿ ಸೇರಿದಂತೆ ಆರ್ಥಿಕ ವ್ಯವಹಾರಗಳನ್ನು ಜನರು ಹೆಚ್ಚು ಮಾಡುತ್ತಾರೆ ಎಂಬುದು ಗ್ಯಾಂಗ್‌ನ ಅಂದಾಜಿಸಿತ್ತು.
ಹಾಗಾಗಿ ಸೋಮವಾರ ಹಾಗೂ ಶುಕ್ರವಾರ ಬ್ಯಾಂಕ್ ಹಾಗೂ ಸಬ್ ರಿಜಿಸ್ಟ್ರರ್ ಕಚೇರಿಗಳ ಬಳಿ ನಿಂತು ಹಣ ಕಳವು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅಂತೆಯೇ ಜೂ.೨ರಂದು ಆರ್.ಆರ್.ನಗರದ ಸಬ್ ರಿಜಿಸ್ಟ್ರರ್ ಕಚೇರಿ ಬಳಿ ಕಾರ್ತಿ ಹಾಗೂ ದಾಸ್ ಸೇರಿದಂತೆ ಓಜಿಕುಪ್ಪಂನ ಐವರು ಸದಸ್ಯರು ಹಣಕ್ಕೆ ಹೊಂಚು ಹಾಕಿದ್ದರು.
ಆಗ ನಿವೇಶನದ ನೊಂದಣಿ ಸಲುವಾಗಿ ಕಾರಿನಲ್ಲಿ ಬಂದಿದ್ದ ಜೆ.ಪಿ.ನಗರದ ಚೇತನ, ಕಾರಿನಲ್ಲೇ .೧೫ ಲಕ್ಷ ತುಂಬಿದ್ದ ಬ್ಯಾಗ್ ಇಟ್ಟು ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿದ್ದರು. ಆ ವೇಳೆ ಕಾರಿನ ಗಾಜು ಒಡೆದು ಹಣವಿದ್ದ ಬ್ಯಾಗ್ ದೋಚಿ ಆರೋಪಿಗಳು ಪರಾರಿಯಾಗಿದ್ದರು ಎಂದು ವಿವರಿಸಿದ್ದಾರೆ.
ಈ ಕೃತ್ಯದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರ್.ಆರ್.ನಗರ ಹಾಗೂ ಮೈಸೂರು ರಸ್ತೆ ವ್ಯಾಪ್ತಿ ಸುಮಾರು ೨೦೦ಕ್ಕೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೃತ್ಯಕ್ಕೆ ಬಳಸಿದ್ದ ಬೈಕ್‌ಗಳ ನಂಬರ್ ಪತ್ತೆಯಾಯಿತು. ಈ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಚೆನ್ನೈ ನಗರದಲ್ಲಿ ಇಬ್ಬರು ಸಿಕ್ಕಿಬಿದ್ದು, ಇನ್ನುಳಿದ ಮೂವರು ತಪ್ಪಿಸಿಕೊಂಡಿದ್ದಾರೆ ಎಂದು ತಿಳಿಸಿದರು.