ಬೆಂಗಳೂರು,ಮಾ.೩೧-ಮನೆಗಳ್ಳತನ ಮಾಡುವುದನ್ನೆ ವೃತ್ತಿಯಾನ್ನಾಗಿಸಿಕೊಂಡಿದ್ದ ಚಾಳಿಗೆ ಬಿದ್ದ ನೇಪಾಳದ ಐವರು ಆರೋಪಿಗಳನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ವಿದ್ಯಾರಣ್ಯಪುರ ಪೊಲೀಸರು ೩೫.೮೦ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.
ನೇಪಾಳದ ಸೂದರ್ ಪಶ್ಚಿಮ್ ರಾಜ್ಯದ ಮೋಹನ್ ಬಿಸ್ವಕರ್ಮ ಅಲಿಯಾಸ್ ಮೋಹನ್ ಸಿಂಗ್(೨೮ )ಕಾರ್ನಲಿ ರಾಜ್ಯದ ಜನಕ್ ಜೈಶಿ ಅಲಿಯಾಸ್ ಜನಕ್ ಜ್ಯೋಷಿ(೨೬),ಬಿಬೇಕ್ ರಾಜ್ ದೇವಕೂಟ(೨೬),ಕಮಲ ಬಿಕೆ ಅಲಿಯಾಸ್ ಕಮಲ ಸಿಂಣ್(೪೮)ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ೫ ಲಕ್ಷ ನಗದು,೫೦೫ ಗ್ರಾಂ ಚಿನ್ನಾಭರಣ ಮತ್ತು ೩ ಕೆಜಿ ಬೆಳ್ಳಿಯ ಸಾಮಾನುಗಳು, ೫೦ ಸಾವಿರ ಬೆಲೆಯ ನಾಲ್ಕು ವಿವಿಧ ಕಂಪನಿಯ ವಾಚ್‌ಗಳು ಮತ್ತು ಸುಮಾರು ೫೫ ಸಾವಿರ ಬೆಲೆಯ ಹೋಂಡಾ ಆಕ್ಟೀವಾ ಸ್ಕೂಟರ್ ಸೇರಿ ೩೫.೮೦ ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿಪ್ರಸಾದ್ ಅವರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ ವಿದ್ಯಾರಣ್ಯಪುರದ ಮೂರು ಹಾಗೂ ಯಲಹಂಕ ನ್ಯೂ ಟೌನ್‌ನ ಒಂದು ಸೇರಿ ನಾಲ್ಕು ಮನೆಗಳ್ಳತನದ ಪ್ರಕರಣಗಳು ಪತ್ತೆಯಾಗಿವೆ ಎಂದರು.
ಕಳೆದ ಮಾ.೬ ರಂದು ವಿದ್ಯಾರಣ್ಯಪುರ ಎ.ಎಂ.ಎಸ್ ಎಕ್ಸ್‌ಟೆಕ್ಷನ್ ನಂದನ್ ಕುಮರ್ ಅವರು ಸ್ವಂತ ಊರಾದ ದೊಡ್ಡಬಳ್ಳಾಪುರದ ಕಂಚಿಗನಾಳ ಗ್ರಾಮಕ್ಕೆ ತೆರಳಿದ್ದ ವೇಳೆ ಬಂಧಿತ ಆರೋಪಿಗಳು ಮನೆಯ ಬಾಗಿಲ ಲಾಕ್‌ನ್ನು ಮುರಿದು ಮನೆಯಲ್ಲಿದ್ದ ೯೮೯.೫೮
ತೂಕದ ಚಿನ್ನಾಭರಣಗಳು ಮತ್ತು ೬ ಕೆಜಿ ೫೦೦ ಗ್ರಾಂ ತೂಕದ ಬೆಳ್ಳಿಯ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ವಿದ್ಯಾರಣ್ಯ ಪುರ ಪೊಲೀಸ್ ಇನ್ಸ್‌ಪೆಕ್ಟರ್ ಸುಂದರ ಮತ್ತವರ ಸಿಬ್ಬಂದಿ ಖಚಿತವಾದ ಮಾಹಿತಿಯನ್ನು ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಮೋಹನ್ ಬಿಸ್ವಕರ್ಮ ಮುಂಬೈನ ಚಾರ್‍ಕೋಪ್, ಮಹದೇವಪುರ, ಆರ್ ಟಿ ನಗರ, ಕೋರಮಂಗಲ, ಯಲಹಂಕ ನ್ಯೂ ಟೌನ್ ವಿದ್ಯಾರಣ್ಯಪುರ ಠಾಣೆಗಳಲ್ಲಿ ಮನೆಗಳ್ಳತನ ಪ್ರಕರಣಗಳಲ್ಲಿ ಬಾಗಿಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಹೇಳಿದರು.