ಕುಖ್ಯಾತ ಅಂತಾರಾಜ್ಯ ಕನ್ನಗಳ್ಳರ ಗ್ಯಾಂಗ್ ಪತ್ತೆ 2.25 ಕೋಟಿ ರೂ ಮೌಲ್ಯದ ಚಿನ್ನ ವಶ

ಬೆಂಗಳೂರು,ಜ.೨-ಸರಣಿ ಕನ್ನಗಳವು ಮಾಡುತ್ತಿದ್ದ ಅಂತಾರಾಜ್ಯ ಕನ್ನಗಳ್ಳರ ಗ್ಯಾಂಗ್ ಬಂಧಿಸಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು ೨.೨೫ ಕೋಟಿ ರೂ ಮೌಲ್ಯದ ೪ ಕೆ.ಜಿ.ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶದ ಮುರಾದಾಬಾದ್ ನ ಫಯೂಮ್ ಅಲಿಯಾಸ್ ಎಟಿಎಂ ಫಯೂಮ್ (೩೫) ಹಾಗೂ ಮುರಸಲೀಂ ಮುಹಮ್ಮದ್ ಅಲಿಯಾಸ್ ಸಲೀಂ (೪೨) ಬಂಧಿತ ಕುಖ್ಯಾತ ಕನ್ನಗಳ್ಳರಾಗಿದ್ದಾರೆ
ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ.
ಆರೋಪಿಗಳ ಬಂಧನದಿಂದ ೩೫ ಕ್ಕೂ ಕನ್ನಗಳವು ಪ್ರಕರಣಗಳು ಪತ್ತೆಯಾಗಿದ್ದು ಪೊಲೀಸ್ ಇಲಾಖೆಗೆ ಇವರಿಬ್ಬರ ಬಂಧನ ಸವಾಲಾಗಿ ಪರಿಣಮಿಸಿತ್ತು ಎಂದರು.
ಆರೋಪಿಗಳು ಉತ್ತರ ಪ್ರದೇಶ, ದೆಹಲಿ, ಹರಿಯಾಣ ರಾಜ್ಯಗಳಿಂದ ಕಾರಿನಲ್ಲಿ ಬೆಂಗಳೂರಿಗೆ ಬಂದು ಸರಣಿ ಮನೆ ಕನ್ನಕಳವು ಮಾಡುತ್ತಿದ್ದರು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಆರೋಪಿಗಳಿಂದ ೪ ಕೆ.ಜಿ.ಚಿನ್ನಾಭರಣವನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ನಗರದ ಹಲವು ವರ್ಷಗಳಿಂದ ಪತ್ತೆಯಾಗದ ಕನ್ನಗಳವು ಪ್ರಕರಣಗಳು ಆರೋಪಿಗಳ ಬಂಧನದಿಂದ ಬೆಳಕಿಗೆ ಬಂದಿವೆ ಎಂದು ಮಾಹಿತಿ ನೀಡಿದರು.
೧೦ ಸಾವಿರ ಬಹುಮಾನ:
ಪ್ರಮುಖ ಆರೋಪಿ ಫಯೂಮ್ ವಿರುದ್ಧ ಉತ್ತರ ಪ್ರದೇಶದ ಮುರಾದಾಬಾದ್ ಜಿಲ್ಲೆಯಲ್ಲಿ ದರೋಡೆ, ಕೊಲೆ, ಕೊಲೆಯತ್ನ ಹಾಗೂ ಇತರೆ ಸುಮಾರು ೪೦ ಪ್ರಕರಣಗಳು ದಾಖಲಾಗಿವೆ. ಈತನ ಸುಳಿವು ನೀಡಿದವರಿಗೆ ಉತ್ತರ ಪ್ರದೇಶ ಸರ್ಕಾರ ೧೦,೦೦೦ ರೂ. ನಗದು ಬಹುಮಾನವನ್ನು ಘೋಷಿಸಿದೆ.
ಆರೋಪಿ ೨೦೧೬ನೇ ಸಾಲಿನಲ್ಲಿ ಉತ್ತರ ಪ್ರದೇಶದ ನೋಯಿಡಾ ಜೈಲಿನ್ಲಲಿರುವಾಗ ಇತರ ಆರೋಪಿಗಳೊಂದಿಗೆ ಕಳ್ಳತನಕ್ಕೆ ಸಂಚು ರೂಪಿಸಿಕೊಂಡಿದ್ದ. ೨೦೧೭ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ವೃತ್ತಿಪರ ಕಳ್ಳತನಕ್ಕೆ ಇಳಿಯಲು ಗ್ಯಾಂಗ್ ಕಟ್ಟಿದ್ದಾನೆ.
ಗ್ಯಾಂಗ್ ಕಟ್ಟಿದ ಬಳಿಕ ಉತ್ತರ ಪ್ರದೇಶ, ಹರಿಯಾಣ, ದೆಹಲಿಯಿಂದ ಕಾರಿನಲ್ಲಿ ಕರ್ನಾಟಕದ ಬೆಂಗಳೂರು, ಬೆಳಗಾವಿ, ಗೋವಾ ರಾಜ್ಯದ ಪಣಜಿ, ತೆಲಂಗಾಣದ ಹೈದರಾಬಾದ್ ಗೆ ಬಂದು ಸರಣಿ ಮನೆ ಕನ್ನ ಕಳವು ಮಾಡಿದ್ದಾನೆ ಎಂದು ಅವರು ತಿಳಿಸಿದರು.
ನಗರದಲ್ಲಿ ಸಿಕ್ಕಿಬಿದ್ದ:
ನಗರದ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದ್ದ ಕನ್ನಕಳವು ಕೃತ್ಯದ ಬೆನ್ನತ್ತಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅವರು ಕಳವು ಮಾಡಿದ ಮಾಲುಗಳನ್ನು ಹರಿಯಾಣ ರಾಜ್ಯದ ಗುರುಗಾಂವ್ ಜೈಲಿನಲ್ಲಿರುವ ಕೊಲೆ ಕೇಸಿನ ಆರೋಪಿ ಅಶೋಕ್ ಲಾಟಿ ಎಂಬಾತನ ಮೂಲಕ ದೆಹಲಿ, ಹರಿಯಾಣ, ಉತ್ತರ ಪ್ರದೇಶದಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ. ಆರೋಪಿಗಳು ತಿಳಿಸಿದ ಮಾಹಿತಿ ಮೇರೆಗೆ, ಸಿಸಿಬಿ ಪೊಲೀಸ್ ತಂಡ ಹರಿಯಾಣಕ್ಕೆ ಹೋಗಿದೆ.
ಚಿನ್ನದ ಒಡವೆಗಳನ್ನು ಅಮಾನತುಪಡಿಸಲು ಆರೋಪಿಗಳೊಂದಿಗೆ ಹರಿಯಾಣದ ಗುರಗಾಂವ್ ಜಿಲ್ಲೆಯ ಜೈಲಿನ ಬಳಿ ಕರೆದುಕೊಂಡು ಹೋಗಿ ಅಶೋಕ್ ಪಾಟಿಯ ಬಗ್ಗೆ ಗುರಗಾಂವ್ ಜೈಲಿನ ಅಧಿಕಾರಿಗಳನ್ನು ವಿಚಾರಿಸಿದಾಗ, ಅಶೋಕ್ ಲಾಟಿ ಎಂಬಾತ ಒಂದು ವರ್ಷದ ಹಿಂದೆ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ದಿಕ್ಕು ತಪ್ಪಿಸುವ ಯತ್ನ:
ಆರೋಪಿ ಫಯೂಮ್ ಸುಳ್ಳು ಹೇಳಿ ಪೊಲೀಸರ ದಿಕ್ಕು ತಪ್ಪಿಸಲು ಪ್ರಯತ್ನಿಸಿರುವುದು ಗೊತ್ತಾಗಿದೆ. ನಂತರ ಕೂಲಂಕಷವಾಗಿ ವಿಚಾರಣೆ ನಡೆಸಿದಾಗ, ಆರೋಪಿಗಳು ಕಳವು ಮಾಡಿದ ನಂತರ ಚಿನ್ನದ ಒಡವೆಗಳನ್ನು ಹಂಚಿಕೊಂಡು ತಮ್ಮ ಪಾಲಿಗೆ ಬಂದ ಒಡವೆಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಆರೋಪಿ ಫಯೂಮ್ ತನ್ನ ಪಾಲಿಗೆ ಬಂದ ಚಿನ್ನದ ಒಡವೆಗಳನ್ನು ಉತ್ತರ ಪ್ರದೇಶದ ಮುರಾದಾಬಾದ್ ಎಂಬ ಊರಿನಲ್ಲಿ ತನ್ನ ಮನೆಯಲ್ಲಿ ಹಾಗೂ ತನ್ನ ತಂಗಿಯ ಮನೆಯಲ್ಲಿ ಇಟ್ಟಿರುವುದು ತಿಳಿದುಬಂದಿದೆ.
ನಂತರ ಆರೋಪಿಯೊಂದಿಗೆ ಹರಿಯಾಣದ ಗುರಗಾಂವ್ ನಿಂದ ಉತ್ತರ ಪ್ರದೇಶದ ಮುರಾದಾಬಾದ್ ತಲುಪಿ ಅಲ್ಲಿನ ಕೊತ್ವಾಲಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ತನಿಖೆ ಕೈಗೊಂಡು ೪ ಕೆ.ಜಿ.ಚಿನ್ನದ ಒಡವೆಗಳನ್ನು ಸಿಸಿಬಿ ತಂಡ ವಶಪಡಿಸಿಕೊಂಡಿದೆ ಎಂದು ಕಮಲ್ ಪಂಥ್ ತಿಳಿಸಿದರು.
ನಗರದೆಲ್ಲೆಡೆ ಕೃತ್ಯ:
ಸಿಸಿಬಿ ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಕೆ.ಪಿ.ರವಿಕುಮಾರ್ ನೇತೃತ್ವದಲ್ಲಿ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಎಸಿಪಿ ನಾಗರಾಜ್, ಬೆರಳುಮುದ್ರೆ ಘಟಕದ ಎಸಿಪಿ ರಾಘವೇಂದ್ರ ಶಿಂದೆ, ಪೊಲೀಸ್ ಇನ್ಸ್ ಪೆಕ್ಟರ್ ಹಜರೇಶ್ ಕಿಲ್ಲೇದಾರ್ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈ ತಂಡ ಸುಮಾರು ೨ ಕೋಟಿ ೨೫ ಲಕ್ಷ ರೂ. ಬೆಲೆ ಬಾಳುವ ೪ ಕೆ.ಜಿ.ತೂಕದ ಚಿನ್ನಾಭರಣ ವಶಪಡಿಸಿಕೊಂಡಿದೆ ಎಂದರು.
ಆರೋಪಿಗಳ ಬಂಧನದಿಂದ ಸುಮಾರು ೩೫ ಪ್ರಕರಣಗಳು ಬೆಳಕಿಗೆ ಬಂದಿದೆ.
ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ೪, ಕೊಡಿಗೇಹಳ್ಳಿಯ ೨, ಅನ್ನಪೂರ್ಣೇಶ್ವರಿ ನಗರದ ೪, ಬ್ಯಾಡರಹಳ್ಳಿಯ ೯, ನಂದಿನಿಲೇಔಟ್ ನ ೫, ರಾಜಗೋಪಾಲನಗರದ ೨, ಕಾಡುಗೊಂಡನಹಳ್ಳಿ, ಹೆಣ್ಣೂರು , ಅಮೃತಹಳ್ಳಿ, ಬಾಣಸವಾಡಿ, ಹೈಗ್ರೌಂಡ್ಸ್ , ಜ್ಞಾನಭಾರತಿಯ ತಲಾ ೧ ಪ್ರಕರಣ, ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ೩ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಕಮಲ್ ಪಂಥ್ ತಿಳಿಸಿದರು.
ನಗದು ಬಹುಮಾನ:
ಈ ಕಾರ್ಯದಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು ೭೫ ಸಾವಿರ ರೂ.ನಗದು ಬಹುಮಾನ ಘೋಷಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಡಿಸಿಪಿ ರವಿಕುಮಾರ್ ಅವರಿದ್ದರು.

ತಂಗಿಯ ಮನೆಯಲ್ಲಿ ಬಚ್ಚಿಟ್ಟಿದ್ದ
ಬಂಧಿತ ಕನ್ನಗಳ್ಳರು ಕಳವು ಮಾಡಿದ ನಂತರ ಚಿನ್ನದ ಒಡವೆಗಳನ್ನು ಹಂಚಿಕೊಂಡು ಅವುಗಳನ್ನು ತಮ್ಮ ರಾಜ್ಯಕ್ಕೆ ಸಾಗಿಸುತ್ತಿದ್ದರು ಆರೋಪಿ ಫಯೂಮ್ ತನ್ನ ಪಾಲಿಗೆ ಬಂದ ಚಿನ್ನದ ಒಡವೆಗಳನ್ನು ಉತ್ತರ ಪ್ರದೇಶದ ಮುರಾದಾಬಾದ್ ಎಂಬ ಊರಿನಲ್ಲಿ ತನ್ನ ಮನೆಯಲ್ಲಿ ಹಾಗೂ ತನ್ನ ತಂಗಿಯ ಮನೆಯಲ್ಲಿ ಇಟ್ಟಿದ್ದ.ಆತನೊಂದಿಗೆ ಹರಿಯಾಣದ ಗುರಗಾಂವ್ ನಿಂದ ಉತ್ತರ ಪ್ರದೇಶದ ಮುರಾದಾಬಾದ್ ಗೆ ಸತತ ೭ ದಿನಗಳವರೆಗೆ ಯಾತ್ರೆ ಮಾಡಿ ತಲುಪಿದೆ. ಅಲ್ಲಿನ ಕೊತ್ವಾಲಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ತನಿಖೆ ಕೈಗೊಂಡು ೪ ಕೆ.ಜಿ.ಚಿನ್ನದ ಒಡವೆಗಳನ್ನು ಸಿಸಿಬಿ ತಂಡ ವಶಪಡಿಸಿಕೊಂಡಿದೆ.

  • ಸಂದೀಪ್ ಪಾಟೀಲ್
    ಜಂಟಿ ಪೊಲೀಸ್ ಆಯುಕ್ತ ಸಿಸಿಬಿ