ಕುಕ್ಕರ್ ಸ್ಫೋಟ ಶಾರೀಕ್ ಗೆ ಪಿಎಫ್‌ಐ ನಾಯಕರ ನಂಟು

ಮಂಗಳೂರು,ನ.೨೩-ನಗರದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ಶಂಕಿತ ಉಗ್ರ ಶಾರೀಕ್‌ನ ಬೆನ್ನತ್ತಿರುವ ಖಾಕಿ ಪಡೆಗೆ ಇನ್ನಷ್ಟು ವಿಷಯಗಳು ಬಹಿರಂಗವಾಗಿವೆ. ಈತನಿಗೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್?ಐ) ಸಂಘಟನೆಯ ನಾಯಕರ ಜೊತೆ ನಂಟು ಇರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಪ್ರಕರಣದ ಆರೋಪಿ ಮೊಹಮ್ಮದ್ ಶಾರೀಕ್‌ಗೂ ತಮಿಳುನಾಡಿನ ಕೊಯಮತ್ತೂರಿನಲ್ಲಿ ದೀಪಾವಳಿ ಸಮಯದಲ್ಲಿ ಅ.೨೩ ರಂದು ಸಂಗಮೇಶ್ವರ ದೇವಸ್ಥಾನ ಬಳಿಯ ನಡೆದಿದ್ದ ಕಾರು ಬಾಂಬ್ ಸ್ಫೋಟ ಪ್ರಕರಣಕ್ಕೂ ನಂಟು ಇರುವ ಬಗ್ಗೆ ಪೊಲೀಸರು ತನಿಖೆ ಬಿರುಸುಗೊಳಿಸಿದ್ದಾರೆ.ಸಂಗಮೇಶ್ವರ ದೇವಸ್ಥಾನ ಬಳಿ ಸ್ಫೋಟ ಸಂಭವಿಸುವುದಕ್ಕೆ ಒಂದೂವರೆ ತಿಂಗಳ ಮೊದಲು ಶಾರೀಕ್ ಕೊಯಮತ್ತೂರಿಗೆ ಹೋಗಿದ್ದ ವಿಚಾರ ಬೆಳಕಿಗೆ ಬಂದಿದೆ.ಅಲ್ಲೂ ಸುಳ್ಳು ಮಾಹಿತಿ ನೀಡಿ ಹಿಂದೂ ಎಂದು ಪರಿಚಯಿಸಿಕೊಂಡು ಮೂರು ನಾಲ್ಕು ದಿನ ಅಲ್ಲಿಯೇ ಬಾಡಿಗೆ ಕೊಠಡಿಯಲ್ಲಿ ನೆಲೆಸಿದ್ದ. ಇಲ್ಲಿ ಬಳ್ಳಾರಿಯ ಸಂಡೂರಿನ ಅರುಣ್ ಕುಮಾರ್ ಗಾವಳಿ ಅವರ ಆಧಾರ್ ಕಾರ್ಡ್ ನೀಡಿದ್ದ. ಅರುಣ್ ಕುಮಾರ್ ಗಾವಳಿ ಅವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಅವರ ಆಧಾರ್ ಕಾರ್ಡ್ ೬ ತಿಂಗಳ ಹಿಂದೆ ಕಳವಾಗಿದ್ದು ಗೊತ್ತಾಗಿತ್ತು. ಅವರು ಕೊಯಮತ್ತೂರಿಗೆ ಹೋಗಿಯೇ ಇರಲಿಲ್ಲ ವಿಚಾರ ದೃಢಪಟ್ಟಿತ್ತು.ಕೊಯಮತ್ತೂರು ಬಾಂಬ್ ಸ್ಫೋಟದ ಆರೋಪಿಗಳಿಗೂ ಶಾರಿಕ್‌ಗೂ ನಂಟು ಇರುವ ಬಗ್ಗೆ ಪೊಲೀಸರಿಗೆ ಈಗ ಬಲವಾದ ಸಂಶಯ ಇದೆ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಶಾರೀಕ್ ಗಾಯಗೊಂಡ ಮಾಹಿತಿ ಸಿಗುತ್ತಿದ್ದಂತೆಯೇ ಕೊಯಮತ್ತೂರು ಪೊಲೀಸರ ತಂಡವೂ ಮಂಗಳೂರಿಗೆ ಆಗಮಿಸಿದೆ
ಕೊಯಮತ್ತೂರು ನಂಟು:
ಕೊಯಮತ್ತೂರಿನಲ್ಲಿ ಪಿಎಫ್‌ಐ ನಾಯಕರನ್ನು ಶಾರೀಕ್ ಭೇಟಿಯಾಗಿದ್ದ ಶಂಕೆ ವ್ಯಕ್ತವಾಗಿದೆ. ಜೊತೆಗೆ ೧೯೯೮ರ ಕೊಯಮತ್ತೂರು ಬಾಂಬ್ ಸ್ಫೋಟ ರೂವಾರಿ ಎಸ್.ಎ.ಬಾಷಾ ಸಂಬಂಧಿ ಮುಹಮ್ಮದ್ ತಲ್ಕನನ್ನು ಭೇಟಿಯಾದ ಅನುಮಾನ ಬಂದಿದೆ.
ಮೋಸ್ಟ್ ವಾಂಟೆಡ್ ಅಬ್ದುಲ್ ಮತೀನ್‌ನಿಂದ ಮುಹಮ್ಮದ್ ತಲ್ಕ ಪರಿಚಯವಾಗಿರಬಹುದು ಎನ್ನಲಾಗುತ್ತಿದೆ. ತಮಿಳುನಾಡು ಹಿಂದೂ ಮುಖಂಡನ ಹತ್ಯೆಯಲ್ಲಿ ಮತೀನ್ ಹೆಸರು ಕೇಳಿ ಬಂದಿತ್ತು. ತಮಿಳುನಾಡಿನ ಹಲವು ಉಗ್ರ ಜಾಲ ಹೊಂದಿದ್ದವರ ಜೊತೆ ಮತೀನ್‌ಗೆ ಸಂಪರ್ಕ ಇದ್ದು ಆತನೇ ಶಾರೀಕ್‌ಗೆ ಪರಿಚಯ ಮಾಡಿದ್ದಾನೆ ಎಂಬ ಅನುಮಾನ ಬಂದಿದೆ. ಈ ಅನುಮಾನ ಬಂದ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಷ್ಟೇ ಅಲ್ಲದೇ ಶಾರೀಕ್ ತಮಿಳುನಾಡಿಗೆ ಹೋಗಿದ್ದಾಗ ಅಲ್ಲಿ ತಂಗಲು ಪಿಎಫ್‌ಐ ನಾಯಕರು ಶಾರೀಕ್‌ಗೆ ಸಹಾಯ ಮಾಡಿರಬಹುದು ಎಂಬ ಶಂಕೆ ಬಂದಿದೆ.ಈ ನಡುವೆ ಮಾಧ್ಯಮಗಳ ಜೊತೆ ಮಾತನಾಡಿದ್ದ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಕೊಯಮತ್ತೂರಿನ ಸ್ಫೋಟ ಪ್ರಕರಣದ ಆಯಾಮದಲ್ಲೂ ತನಿಖೆ ನಡೆಯಲಿದೆ. ಮಂಗಳೂರಿನ ಘಟನೆ ನಡೆಯುವುದಕ್ಕೆ ಮುನ್ನ ಆರೋಪಿ ಯಾವೆಲ್ಲ ಪ್ರದೇಶಗಳಿಗೆ ಭೇಟಿ ನೀಡಿದ್ದ, ಯಾರನ್ನೆಲ್ಲ ಭೇಟಿ ಮಾಡಿದ್ದ ಎಂಬ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದಿದ್ದರು.
ತಮಿಳಿನಲ್ಲಿ ಮಾತನಾಡಿದ್ದ:
ಮೈಸೂರಿನಲ್ಲಿ ಮೊಬೈಲ್ ತರಬೇತಿ ಕೇಂದ್ರದಲ್ಲಿದ್ದಾಗ ಶಾರೀಕ್ ಮೊಬೈಲ್‌ನಲ್ಲಿ ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದ. ಧಾರವಾಡ ಮೂಲದ ನಿನಗೆ ತಮಿಳು ಹೇಗೆ ಬರುತ್ತದೆ ಎಂದು ಪ್ರಶ್ನಿಸಿದ್ದಕ್ಕೆ ಆತ ನಾನು ಕೆಲ ಸಮಯ ತಮಿಳುನಾಡಿನಲ್ಲಿ ನೆಲೆಸಿದ್ದೆ. ಅಲ್ಲೂ ನನಗೆ ಸ್ನೇಹಿತರಿದ್ದಾರೆ. ಅವರ ಜೊತೆ ನಾನು ಮಾತನಾಡುತ್ತಿದ್ದೇನೆ ಎಂದು ಹೇಳಿದ್ದ.