ಕುಕ್ಕರ್ ಬಾಂಬ್ ಸ್ಫೋಟ ಸಮರ್ಥನೆ ಪ್ರತ್ಯೇಕ ತನಿಖೆ ಎಡಿಜಿಪಿ


ಮಂಗಳೂರು,ನ.೨೪- ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ಸಮರ್ಥಿಸಿ ಬೆಂಬಲಿಸಿರುವ ‘ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್’ (ಐಆರ್ ಸಿ) ಮಾಧ್ಯಮ ಹೇಳಿಕೆ ಕುರಿತು ಪ್ರತ್ಯೇಕ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಕೃತ್ಯದ ಹೊಣೆ ಹೊತ್ತು ಸಂಘಟನೆಯೊಂದು ಹೇಳಿಕೆ ಬಿಡುಗಡೆ ಮಾಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ‘ಈ ರೀತಿಯ ಹೇಳಿಕೆ ಹೊರಡಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಅದರಲ್ಲಿರುವ ಮಾಹಿತಿಯ ಸತ್ಯಾಸತ್ಯತೆ ಎಷ್ಟಿದೆಯೋ ಗೊತ್ತಿಲ್ಲ’ ಎಂದರು.
ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕಾಗಿ ಸಾಗಿದೆ. ಇಂಥ ಸಂದರ್ಭದಲ್ಲಿ ತನಿಖೆಯ ದಿಕ್ಕು ತಪ್ಪಿಸಲು ಇಂಥ ಹೇಳಿಕೆ ಬಿಡುಗಡೆ ಮಾಡಿರಬಹುದು. ಇದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಮತ್ತೊಂದು ತನಿಖೆ ನಡೆಸುತ್ತೇವೆ. ಈ ಪೋಸ್ಟ್ ಎಲ್ಲಿಂದ ಪ್ರಸಾರವಾಯಿತು. ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎನ್ನುವ ಬಗ್ಗೆಯೂ ತನಿಖೆ ಮಾಡುತ್ತೇವೆ’ ಎಂದು ಅವರು ತಿಳಿಸಿದರು. ಐಆರ್‌ಸಿ ಹೇಳಿಕೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹೆಸರು ಸಹ ಉಲ್ಲೇಖವಾಗಿತ್ತು. ‘ಅಲೋಕ್ ಕುಮಾರ್ ನಿಮ್ಮ ಸಂತೋಷ ಅಲ್ಪಕಾಲಿಕವಾಗಿರುತ್ತದೆ. ನಿಮ್ಮ ದಬ್ಬಾಳಿಕೆಯನ್ನು ಫಲವನ್ನು ನೀವು ಶೀಘ್ರದಲ್ಲಿ ಅನುಭವಿಸುತ್ತೀರಿ’ ಎಂದು ಎಚ್ಚರಿಸಲಾಗಿತ್ತು.
ಈ ನಡುವೆ ಸ್ಫೋಟದ ಹೊಣೆ ಹೊತ್ತುಕೊಂಡ ಇಸ್ಲಾಮಿಕ್? ರೆಸಿಸ್ಟೆನ್ಸ್ ಕೌನ್ಸಿಲ್ ಡಾರ್ಕ್‌ವೆಬ್‌ನಲ್ಲಿ ಸ್ಫೋಟದ ರೂವಾರಿ ನಾವೇ ಎಂದು ಹೇಳಿಕೊಂಡಿವೆ. ಪೋಸ್ಟ್‌ಗೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆಯಿಂದ ಕರ್ನಾಟಕ ಪೊಲೀಸರಿಗೆ ಮಾಹಿತಿ ರವಾನೆ ಮಾಡಲಾಗಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳು ಈಗಾಗಲೇ ತನಿಖೆ ಆರಂಭಿಸಿವೆ ಎಂದು ಪೊಲೀಸರು ತಿಳಿಸಿವೆ.