ಕುಕನೂರು ಸಮಗ್ರ ಅಭಿವೃದ್ಧಿಗೆ ರಾಜೀ ಮಾತೇ ಇಲ್ಲ – ಪ.ಪಂ.ಅಧ್ಯಕ್ಷ ಶಂಭು ಜೋಳದ

Exif_JPEG_420

ಕುಕನೂರು,ಜೂ.5- ಕುಕನೂರು ಸಮಗ್ರ ಅಭಿವೃದ್ಧಿಗೆ ರಾಜೀ ಮಾತೇ ಇಲ್ಲ ಎಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಶಂಭು ಜೋಳದ ಹೇಳಿದರು. ಅವರು ಶುಕ್ರವಾರ ಸಂಜೆ ಇಲ್ಲಿಯ ಎಪಿಎಂಸಿ ಆವರಣದಲ್ಲಿ ರ್ಯಾವಣಿಕಿ ಗ್ರಾಮದ .ಅನ್ವಿತಾ, ಮಹಿಳೆಯರ, ವೃದ್ಧರ ಕಲ್ಯಾಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಪತ್ರಕರ್ತರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾತನಾಡಿದರು. ಊರಿನ ಸಮಗ್ರ ಅಭಿವೃದ್ಧಿಗೊಳಿಸಲು ತಾವು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದು, ಇದುವರೆಗೆ ಯಾರೂ ಅಭಿವೃದ್ಧಿ ಕಾರ್ಯಗಳನ್ನು ಮಾಡದ ಕಾರ್ಯಗಳನ್ನು ತಾವು ಮಾಡುತ್ತಿದ್ದು, ಇದಕ್ಕೆ ಶಾಸಕ ಹಾಲಪ್ಪ ಆಚಾರ ಅವರ ಮಾರ್ಗದರ್ಶನ ತಮ್ಮ ಮೇಲೆ ಸದಾ ಇದ್ದು, ಯಾವುದೇ ಅಡೆತಡೆ ಬಂದರೂ ತಾವು ಹಿಂಜರಿಯುವುದಿಲ್ಲ, ಒಂದು ವೇಳೆ ಪ್ರಾಣತ್ಯಾಗಕ್ಕೂ ತಾವು ಸಿದ್ದ. ಕುಕನೂರು ಅಭಿವೃದ್ಧಿಗೆ ಶಾಸಕ ಅನುದಾನದಿಂದ 4.50 ಕೋ.ರೂ.ಮಂಜೂರಾಗಿದ್ದು ಅದನ್ನು ಸಮರ್ಪಕ ಬಳಸಿಕೊಳ್ಳಲು ಪ್ರಯತ್ನಿಸಲಾಗುವುದು. ಪ್ರಸ್ತುತ ಕೋವಿಡ್ 19- ಸಂಕಷ್ಟ ಪರಿಸ್ಥಿತಿಯಲ್ಲಿ ಪತ್ರಕರ್ತರು ಪ್ರಾಣದ ಹಂಗು ತೊರದು ಕಾರ್ಯ ನಿರ್ವಹಿಸುತ್ತಿದ್ದು ಇವರ ಸಂಕಷ್ಟಕ್ಕೆ ಸರಕಾರ ಎಷ್ಟೇ ಪ್ರೋತ್ಸಾಹ ನೀಡಿದರೂ ಸಾಲದು ಹೀಗಾಗಿ ತಾವು ತಮ್ಮ ವೈಯಕ್ತಿಕವಾಗಿ ಪತ್ರಕರ್ತರಿಗೆ ವಿಶೇಷ ಕಿಟ್ ಒದಗಿಸಲು ಇಚ್ಚಿಸಿರುವುದಾಗಿ ತಿಳಿಸಿದರು.
ಸಂಸ್ಥೆಯ ಸುನೀಲ್ ಬೆಲ್ಲದ್ ಅವರು ಮಾತನಾಡಿ, ಕೋವಿಡ್ 19 ರ ಹಿನ್ನೆಲೆಯಲ್ಲಿ ತಮ್ಮ ಸಂಸ್ಥೆಯು ಕಳೆದ ವರ್ಷದಿಂದ ಒಂದಿಲ್ಲೊಂದು ವಿದಾಯಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಕಳೆದ ವರ್ಷ ಜಾನುವಾರುಗಳಿಗೆ ಮೇವು ಹೊಟ್ಟು ಒದಗಿಸಲಾಗಿತ್ತು ಈ ಬಾರಿ ಕುಕನೂರು ಯಲಬುರ್ಗಾ ಅಖಂಡ ತಾಲೂಕಿನಲ್ಲಿ ಸಂಕಷ್ಟದಲ್ಲಿರುವವರಿಗೆ ಆಹಾರ ಕಿಟ್ ಒದಗಿಸಲಾಗುತ್ತಿದೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಎ.ಎಸ್.ಐ.ಮಲ್ಲೇಶಪ್ಪ ,ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರುದ್ರಪ್ಪ ಭಂಡಾರಿ ಮಾತನಾಡಿದರು. ಹಲವಾರು ಪತ್ರಕರ್ತರು ಉಪಸ್ಥಿತರಿದ್ದರು. ಮಂಜುನಾಥ ಅಂಗಡಿ ಸ್ವಾಗತಿಸಿ ನಿರೂಪಿಸಿದರು.