ಕುಕನೂರು ಪಟ್ಟಣ ಪಂಚಾಯ್ತಿ ಗದ್ದುಗೆ ಗುದ್ದಾಟದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಭಾಯಿ ಭಾಯಿ ಶಂಭು ಜೋಳದ ಅಧ್ಯಕ್ಷ ಗೀತಾ ಜಂಗಲಿ ಉಪಾಧ್ಯಕ್ಷೆ

ಕುಕನೂರು, ನ.05 – ಕುಕನೂರು ಪಟ್ಟಣ ಪಂಚಾಯ್ತಿಯ ಇನ್ನುಳಿದ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಶಂಭು ಜೋಳದ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ಸಿನ ಅಭ್ಯರ್ಥಿ ಗೀತಾ ಜಂಗಲಿ ಅವರು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಕಾಂಗ್ರೆಸ್ ಮತ್ತು ಬಿಜೆಪಿಯು ಕುಕನೂರು ಪಟ್ಟಣ ಪಂಚಾಯ್ತಿಯಲ್ಲಿ ಅಧಕಾರ ಚುಕ್ಕಾಣಿ ಹಿಡಿದಿವೆ. ಸ್ಥಳೀಯ ಎಪಿಎಂಸಿ ಸಭಾಂಗಣದಲ್ಲಿ ನಡೆದ ಕುಕನೂರು ಪಟ್ಟಣ ಪಂಚಾಯ್ತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯ ಪ್ರಕ್ರಿಯು ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆ ವರೆಗೆ ನಡೆಯಿತು. ನಂತರ ಕೈ ಎತ್ತುವ ಮೂಲಕ ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಪ.ಪಂ. ಒಟ್ಟು 18ಜನ ಸದಸ್ಯರು ಹಾಗೂ ಸಂಸದ ಮತ್ತು ಶಾಸಕ ಸೇರಿ ಒಟ್ಟು 20 ಮತಗಳನ್ನು ಚಲಾಯಿಸಲಾಗಿತ್ತು. ಬಿಜೆಪಿಯ ಶಂಭು ಜೋಳದ ಅವರು 10 ಮತಗಳನ್ನು ಪಡೆದು ವಿಜೇತರಾದರೆ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ಸಿನ ಅಭ್ಯರ್ಥಿ ರೆಹಮಾನಸಾಬ ಮಕ್ಕಪ್ಪನವರ್ 9 ಮತಗಳನ್ನು ಪಡೆದು ಪರಾಜಿತರಾದರು. ಉಪಾಧ್ಯಕ್ಷ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಗೀತಾ ಅವರನ್ನು ಅವಿರೋಧ ಆಯ್ಕೆ ಘೋಷಿಸಲಾಯಿತು.ಎಂದು ತಹಶೀಲ್ದಾರ್ ಕಿರಣಕುಮಾರ್ ಕುಲಕರ್ಣಿ ತಿಳಿಸಿದರು.
ಒಬ್ಬರು ಗೈರು: ಕಾಂಗ್ರೆಸ್ಸಿನ 11 ನೇ ವಾರ್ಡಿನ ಸದಸ್ಯ ಯಲ್ಲಪ್ಪ ಕೆಂಚವ್ವ ಕಲ್ಮನಿ ಅವರು ಗೈರಾಗಿದ್ದರಿಂದ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಒಂದೇ ಮತದಿಂದ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಕಳೆದುಕೊಳ್ಳಬೇಕಾಯಿತು. 6 ನೇ ವಾರ್ಡಿನ ಸದಸ್ಯರಾಗಿದ್ದ ದೇವಪ್ಪ ಸೋಬಾನದ ಅವರು ಅನರ್ಹರಾಗಿದ್ದರಿಂದ ಆ ಮತವೂ ಕಾಂಗ್ರೆಸ್ ಗೆ ಬರಲು ಕಷ್ಟವಾಯಿತು. ಈ ಬೆಳವಣಿಗೆಯಿಂದ ಸಂಸದ ಕರಡಿ ಮತ್ತು ಶಾಸಕ ಹಾಲಪ್ಪ ಆಚಾರ್ ಅವರ ಮತಗಳ ಆಶೀರ್ವಾದದಿಂದ ಶಂಭು ಗೆಲುವಿಗೆ ಸುಗಮವಾಯಿತು. ನಂತರ ಪತ್ರಿಕೆಯೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ಶಂಭು ಜೋಳದ ಮಾತನಾಡಿ, ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು. ಶಾಸಕ ಮತ್ತು ಸಂಸದರ ಮಾರ್ಗದರ್ಶನದಲ್ಲಿ ಪಟ್ಟಣಕ್ಕೆ ಕುಡಿವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು. ಇರುವ ಕಡಿಮೆ ಅವಧಿಯಲ್ಲಿ ಪ್ರಗತಿ ಪರ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಲಾಗುವುದು. ಪಟ್ಟಣದ ಅಭಿವೃದ್ಧಿಗಾಗಿ ಸದ್ಯ ಮೀಸಲಿರುವ ಅನುದಾನವನ್ನು ಪಾರದರ್ಶಕವಾಗಿ ಬಳಸಲಾಗುವುದು , ಉಪಾಧ್ಯಕ್ಷರಾದ ಗೀತಾ ಜಂಗಲಿ ಅವರು ಅನ್ಯ ಪಕ್ಷದವರಾಗಿದ್ದರೂ ಪಟ್ಟಣದ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಲಾಗುವುದು ಎಂದರು. ಚುನಾವಣಾ ವಿಭಾಗದ ಸಿಬ್ಬಂದಿಯವರು, ಪಟ್ಟಣ ಪಂಚಾಯ್ತಿ ಸಿಬ್ಬಂದಿಯವರು, ಡಿವೈಎಸ್ ಪಿ ವೆಂಕಟಪ್ಪ ನಾಯಕ್,ಸಿಪಿಐ ಎಂ. ನಾಗರೆಡ್ಡಿ, ಪಿ.ಎಸ್.ಐ. ಎನ್. ವೆಂಕಟೇಶ, ಯಲಬುರ್ಗಾ ಪಿಎಸ್ ಐ ಹನುಮಂತಪ್ಪ ತಳವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.