ಕುಕನೂರು ಅಭಿವೃದ್ಧಿಗೆ ಅನ್ಯಾಯವಾದಲ್ಲಿ ಪ.ಪಂ. ಸದಸ್ಯತ್ವಕ್ಕೆ ರಾಜೀನಾಮೆ -ಹಂಪನಾಳ

ಕುಕನೂರು,ನ.20-ಸ್ಥಳೀಯ ಗ್ರಂಥಾಲಯ ಸೇರಿ ಕುಕನೂರು ಪಟ್ಟಣದ ಅಭಿವೃದ್ಧಿಗೆ ಅನ್ಯಾಯವಾದಲ್ಲಿ ತಾವು ಸಹಿಸುವುದಿಲ್ಲ ಪ.ಪಂ. ಸದಸ್ಯತ್ವಕ್ಕೆ ರಾಜೀನಾಮೆ ನೀಡಲೂ ಸಿದ್ಧ ಎಂದು ಪ.ಪಂ.ಸದಸ್ಯ ಹನುಮಯ್ಯ ಹಂಪನಾಳ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಸಂಜೆ ಇಲ್ಲಿಯ ಶಾಖಾ ಗ್ರಂಥಾಲಯ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಗ್ರಂಥಾಲಯವು ನಮ್ಮ ವಾರ್ಡಿನ ವ್ಯಾಪ್ತಿಗೆ ಸೇರಿದೆ, ಈ ವಾರ್ಡ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದು ಹೆಮ್ಮೆ ಇದೆ ಆದರೆ ಪಟ್ಟಣಕ್ಕೆ ಮಾದರಿಯಾಗಬೇಕಿದ್ದ ಗ್ರಂಥಾಲಯಕ್ಕೆ ಸ್ವಂತ ಸೂರಿಲ್ಲದೆ ದನದ ಕೊಟ್ಟಿಗೆಯಂತಾಗಿರುವುದು ನನಗೆ ತೀವ್ರ ಮುಜುಗುರ ತರಿಸಿದೆ, ಸಾಕಷ್ಟು ಜನರನ್ನು ವಿದ್ವಾಂಸರನ್ನಾಗಿ, ಬುದ್ಧಿ ಜೀವಿ, ಸಂಶೋಧಕರನ್ನಾಗಿ ಬೆಳೆಸಿದ ಕೀರ್ತಿ ಕುಕನೂರು ಗ್ರಂಥಾಲಯಕ್ಕೆ ಸಲ್ಲುತ್ತಿದೆ, ಇದು ಬರುವ ದಿನಗಳಲ್ಲಿ ಡಿಜಿಟಲ್ ಶಾಖೆಯಾಗಿ ಕಂಗೊಳಿಸಲು ಎಲ್ಲ ಅಧಿಕಾರಸ್ಥರು ಕೈಜೋಡಿಸಬೇಕು, ಅನಗತ್ಯ ರಾಜಕಾರಣದಿಂದ ಓದುಗರಿಗೆ ತೊಂದರೆ ಮಾಡಿದಲ್ಲಿ ಪ.ಪಂ. ಉಪಾಧ್ಯಕ್ಷರು ಮತ್ತು ಸಾರ್ವಜನಿಕರೊಂದಿಗೆ ಉಗ್ರ ಹೋರಾಟ ನಡೆಸಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ.ಪಂ. ಉಪಾಧ್ಯಕ್ಷೆ ಗೀತಾ ಮಹಾಂತೇಶ ಜಂಗಲಿ ಮಾತನಾಡಿ, ಗ್ರಂಥಾಲಯದ ಪರಿಸ್ಥಿತಿ ನೋಡಿ ಅಯ್ಯೋ ಅನಿಸಿದೆ ಈ ಬಗ್ಗೆ ತಾವೂ ಸಹ ಪ.ಪಂ. ಸಾಮಾನ್ಯಸಭೆಯಲ್ಲಿ ಚೆರ್ಚಿಸಿ ಸೂಕ್ತ ನ್ಯಾಯ ಒದಗಿಸಲು ಹೋರಾಡುವುದಾಗಿ ತಿಳಿಸಿದರು.
ನಿವೃತ್ತ ಗ್ರಂಥಪಾಲಕ ಎನ್.ಸಿ.ಫಣಿ , ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರುದ್ರಪ್ಪ ಭಂಡಾರಿ , ಕನ್ನಡ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಮುರಾರಿ ಭಜಂತ್ರಿ , ಪತ್ರಕರ್ತರಾದ ಕನಕರಾಯ ,ವೀರಯ್ಯ ಕುರ್ತಕೋಟಿ, ಬಸವರಾಜ ಕೊಡ್ಲಿ ಮಾತನಾಡಿದರು.
ಸಾಹಿತಿ ವಿ.ಜಿ.ಬಳಗೇರಿ,ಮಲ್ಲಣ್ಣ ಗುತ್ತಿ, ಮಾರುತಿ ಗೊರ್ಲೆಕೊಪ್ಪ, ಲಕ್ಷ್ಮಣ ಕಲಾಲ್ ಮೊದಲಾದವರು ಇದ್ದರು.
ಗ್ರಂಥಾಲಯ ಸಹಾಯಕ ಜೈರಪ್ಪ ಸ್ವಾಗತಿಸಿ ನಿರೂಪಿಸಿದರು.