ಕುಂಭಮೇಳದಿಂದ ವಾಪಸ್ ಬಂದವರಿಗೆ ಕೊರೊನಾ ಪರೀಕ್ಷೆ ಕಡ್ಡಾಯ

ಬೆಂಗಳೂರು, ಏ. 15- ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಪವಿತ್ರ ಕುಂಭಮೇಳದಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಮರಳುವ ಯಾತ್ರಿಗಳು ಕೊರೋನಾ ಪರೀಕ್ಷೆಗೆ ಕಡ್ಡಾಯವಾಗಿ ಒಳಪಡಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದ್ದಾರೆ.

ಪವಿತ್ರ ಕುಂಭಮೇಳದಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಮರಳುವ ಯಾತ್ರಿಗಳು ವಾಪಸ್ಸಾದ ಬಳಿಕ ಕಡ್ಡಾಯವಾಗಿ ತಮ್ಮ ಮನೆಗಳಲ್ಲಿ ಪ್ರತ್ಯೇಕಗೊಂಡು ಕೊರೊನಾ ಪರೀಕ್ಷೆಗೆ ಒಳಪಡಬೇಕು. ಕೊರೊನಾ ಪರೀಕ್ಷೆ ವರದಿಯಲ್ಲಿ ನೆಗಟೀವ್ ಬಂದ ನಂತರವಷ್ಟೇ ಯಾತ್ರಿಕರು ತಮ್ಮ ಎಂದಿನ ಕಾರ್ಯಗಳಲ್ಲಿ ತೊಡಗಬೇಕೆಂದು ಅವರಯ ಟ್ವೀಟರ್ ನಲ್ಲಿ ಮನವಿ ಮಾಡಿದ್ದಾರೆ.

ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರಿದ್ದರು. ಸುಮಾರು 5 ಲಕ್ಷ ಸಾಧುಗಳು ಈ ಮೇಳದಲ್ಲಿ ಭಾಗಿಯಾಗಿದ್ದಾರೆ . ಈ ನಡುವೆ ಕಳೆದ 48 ಗಂಟೆಯಲ್ಲಿ 1700 ಕ್ಕೂಹೆಚ್ಚು ಮಂದಿಗೆ ಕೊರೊನಾ ಸೋಂಕು ತಗುಲಿದೆ.