ಕುಂಬಾರ ಸಮುದಾಯದ ವಿದ್ಯಾರ್ಥಿಗಳಿಗೆ 2-ಎ ಪ್ರಮಾಣ ಪತ್ರ ನೀಡಲು ಮನವಿ

ಹೊನ್ನಾಳಿ.ಡಿ.೨೨; ಸರಕಾರದ ಆದೇಶ ಇದ್ದರೂ ತಾಲೂಕಿನ ಹಿಂದೂ ಕುಂಬಾರ ಸಮುದಾಯದ ವಿದ್ಯಾರ್ಥಿಗಳಿಗೆ 2-ಎ ಪ್ರಮಾಣಪತ್ರ ನೀಡುತ್ತಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 2-ಎ ಪ್ರಮಾಣಪತ್ರ ಕೊಡಿಸಬೇಕು ಎಂದು ತಾಲೂಕು ಕುಂಬಾರ ಸಮಾಜದ ಮುಖಂಡರು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರಿಗೆ  ಮನವಿ ಅರ್ಪಿಸಿದರು.ಕುಂಬಾರ ಸಮಾಜದ ಮುಖಂಡರಾದ ರಾಜಪ್ಪ ಸಾಸ್ವೇಹಳ್ಳಿ ಹಾಗೂ ಜಿ.ಎಸ್. ಬಸವರಾಜ್ ಮಾತನಾಡಿ, ಕುಂಬಾರ ಸಮಾಜಕ್ಕೆ ಈ ಹಿಂದೆ 2-ಎ ಪ್ರಮಾಣಪತ್ರ ಕೊಡುತ್ತಿದ್ದರು. ಆದರೆ, ಇತ್ತೀಚಿಗೆ ಮತ್ತೆ 2-ಎ ಪ್ರಮಾಣಪತ್ರ ಕೊಡದೇ 2-ಬಿ ಪ್ರಮಾಣಪತ್ರ ಕೊಡುತ್ತಿದ್ದಾರೆ. ಇದರಿಂದ ನಮ್ಮ ಕುಂಬಾರ ಸಮಾಜದ ವಿದ್ಯಾರ್ಥಿಗಳ ನೌಕರಿ ಹಾಗೂ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತಿದೆ. ಕೂಡಲೇ ನಮಗೆ 2-ಎ ಪ್ರಮಾಣಪತ್ರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಎಂ.ಪಿ. ರೇಣುಕಾಚಾರ್ಯ ಅವರಿಗೆ ಮನವಿ ಮಾಡಿದರು.ತಾಲೂಕಿನ ಹಿರೇಬಾಸೂರು ಗ್ರಾಮದ ವಿದ್ಯಾರ್ಥಿಗೆ ಈ ಹಿಂದೆ ಮೂರು ಬಾರಿ 2-ಎ ಪ್ರಮಾಣಪತ್ರ ನೀಡಲಾಗಿದೆ. ಆ ಪ್ರಮಾಣಪತ್ರದ ಅವಧಿ ಮುಗಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದಾಗ ಈಗ ಮತ್ತೆ 3-ಬಿ ಪ್ರಮಾಣಪತ್ರ ನೀಡಿದ್ದಾರೆ. ಇದರಿಂದ ಆ ವಿದ್ಯಾರ್ಥಿಗೆ ತೊಂದೆಯಾಗಿದೆ. ಅಲ್ಲದೇ ಪಕ್ಕದ ಹಾವೇರಿ, ಗದಗ ಹಾಗೂ ಇನ್ನಿತರ ಜಿಲ್ಲೆಗಳಲ್ಲೂ ಕುಂಬಾರ ಸಮಾಜದ ವಿದ್ಯಾರ್ಥಿಗಳಿಗೆ 2-ಎ ಪ್ರಮಾಣಪತ್ರ ನೀಡಲಾಗುತ್ತಿದೆ. ಹೊನ್ನಾಳಿಯಲ್ಲಿ ಮಾತ್ರ ಅಧಿಕಾರಿಗಳು ತೊಂದರೆ ಮಾಡುತ್ತಿದ್ದಾರೆ. ಆದ್ದರಿಂದ, ಈ ಸಮಸ್ಯೆಯನ್ನು ಶಾಸಕರು ತಕ್ಷಣ ಬಗೆಹರಿಸಬೇಕು. ತಹಸೀಲ್ದಾರ್‌ಗಳಿಗೆ ಸೂಚನೆ ನೀಡಬೇಕು ಎಂದು ವಿನಂತಿಸಿದರು.ಶಾಸಕ ಎಂ.ಪಿ. ರೇಣುಕಾಚಾರ್ಯ ತಕ್ಷಣ ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿಗೆ ದೂರವಾಣಿ ಮುಖಾಂತರ ಮಾತನಾಡಿ, ಈ ಹಿಂದಿನAತೆ 2-ಎ ಪ್ರಮಾಣಪತ್ರ ನೀಡಲು ಸೂಚಿಸಿದರು. ನಂತರ ಮಾತನಾಡಿ, ಕುಂಬಾರ ಸಮಾಜದ ವಿದ್ಯಾರ್ಥಿಗಳಿಗೆ 2-ಎ ಪ್ರಮಾಣಪತ್ರ ನೀಡುವಂತೆ ನಾನು ಕೂಡ ಈ ಹಿಂದೆ ಮೌಖಿಕವಾಗಿ ಸೂಚಿಸಿದ್ದೆ. ಆದರೂ ನಿಮ್ಮ ಸಮಸ್ಯೆ ಬಗೆಹರಿದಿಲ್ಲ ಎಂದು ಹೇಳುತ್ತಿದ್ದೀರಿ. ಜನವರಿ ತಿಂಗಳಲ್ಲಿ ಒಂದು ದಿನಾಂಕ ನಿಗದಿ ಮಾಡಿ ನ್ಯಾಮತಿ ಹಾಗೂ ಹೊನ್ನಾಳಿ ತಾಲೂಕಿನ ಕುಂಬಾರ ಸಮಾಜದ ಎಲ್ಲಾ ಮುಖಂಡರು ಒಂದು ಸಭೆ ಆಯೋಜಿಸಿ. ಆ ಸಭೆಗೆ ಜಿಲ್ಲಾಧಿಕಾರಿಗಳನ್ನು ಕರೆಸಿ ಚರ್ಚೆ ಮಾಡೋಣ. ನಂತರ 2-ಎ ಪ್ರಮಾಣಪತ್ರ ಕೊಡಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು.ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಉಮಾ ಓಂಕಾರ್, ಮುಖಂಡರಾದ ಎನ್.ಆರ್. ಸುರೇಶ್, ಷಣ್ಮುಖಪ್ಪ, ಚನ್ನಪ್ಪ, ಮಹೇಶ್‌ಕುಮಾರ್, ಎಚ್.ಜಿ. ಸುರೇಶ್, ಬಸರಾಜ್, ಮೋಹನ್, ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.