ಕುಂಬಾರ ಸಮುದಾಯಕ್ಕೆ ಕೈಲಾದ ಸಹಾಯ ಮಾಡಿ

ಕೋಲಾರ,ಜು.೨೧- ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸದೊಂದಿಗೆ ಉನ್ನತ ಸ್ಥಾನಗಳನ್ನು ಅಲಂಕರಿಸಿ ಸಮುದಾಯದ ಏಳಿಗೆಗೆ ತಮ್ಮ ಕೈಲಾದ ಸಹಾಯ ಮಾಡ ಬೇಕೆಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಡಿ.ಕುಂಬಾರ ಕರೆ ನೀಡಿದರು.
ನಗರದ ಡೂಂಲೈಟ್ ವೃತ್ತದಲ್ಲಿರುವ ಕೆ.ಇ.ಬಿ ಸಮುದಾಯ ಭವನದಲ್ಲಿ ಜಿಲ್ಲಾ ಕುಂಬಾರರ ಸಂಘ ಮತ್ತು ಜಿಲ್ಲಾ ಕುಂಬಾರರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಸಹಯೋಗದಲ್ಲಿ ೨೦೨೨-೨೩ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಜನಾಂಗದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಲೋಕಸೇವಾ ಆಯೋಗದ ಹಂಗಾಮಿ ಮಾಜಿ ಅಧ್ಯಕ್ಷ ವೆಂಕಟಸ್ವಾಮಿ ಮಾತನಾಡಿ ಮಕ್ಕಳು ವಿದ್ಯೆಯ ಜೊತೆಗೆ ವಿನಯ, ಪ್ರಾಮಾಣಿಕತೆ, ಸಮಯಪ್ರಜ್ಞೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸ್ವರ್ಧಾತ್ಮಕ ಪರೀಕ್ಷೆಗಳ ಕಡೆಗೆ ಹೆಚ್ಚಿನ ಗಮನ ನೀಡಿ ಜೀವನದ ಗುರಿ ಸಾಧನೆಗೆ ಮುಂದಾಗಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ಪಿ.ನಾಗರಾಜ, ನಿವೃತ್ತ ಸಹಾಯಕ ಆಯುಕ್ತ ಕೆ.ಎಂ.ನಾಗರಾಜು, ರಾಮನಗರ ಕಾರಾಗೃಹ ಸಹಾಯಕ ಅಧೀಕ್ಷಕಿ ಬಿ.ಆರ್.ನಿರ್ಮಲ, ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ, ನಿವೃತ್ತ ವಾಣೀಜ್ಯ ತೆರಿಗೆ ಇಲಾಖೆಯ ಅಧಿಕಾರಿ ಬಿ.ಇಂದ್ರಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯಿತ್ರಿ, ಹಿರಿಯ ಸಾಹಿತಿ ಬಿ.ಕೆ.ಬನ್ನಪ್ಪ, ತುಮಕೂರು ವಿಶ್ವವಿದ್ಯಾಲಯದ ಮುಖ್ಯಸ್ಥ ಡಾ.ನಾಗಭೂಷಣ, ಕೋಲಾರ ಜಿಲ್ಲಾ ಕುಂಬಾರರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಅಧ್ಯಕ್ಷ ತಬಲ ನಾರಾಯಣಪ್ಪ, ಉಪಾಧ್ಯಕ್ಷರುಗಳಾದ ಜಿ.ನಂಜುಂಡಪ್ಪ, ವೆಂಕಟಸ್ವಾಮಿ ಮತ್ತು ಪದಾಧಿಕಾರಿಗಳು ಹಾಗೂ ಎಲ್ಲಾ ತಾಲೂಕು ಸಂಘಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.