ರಾಯಚೂರು,ಜೂ.೨೦-
ನಗರದ ಬಸವ ಕೇಂದ್ರದಲ್ಲಿ ೧೨ನೇ ಶತಮಾನದ ಶಿವಶರಣ, ಅಪ್ರತಿಮ ಕಾಯಕಯೋಗಿ, ಕುಂಬಾರ ಗುಂಡಯ್ಯನವರ ಪುಣ್ಯ ಸ್ಮರಣೆ ಅಂಗವಾಗಿ ವಿಶೇಷ ಚಿಂತನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಶರಣರ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪ ನಮನವನ್ನು ಸಲ್ಲಿಸುವುದರ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ವಿಶೇಷ ಚಿಂತನೆಗೈದ ಶರಣೆ ಅನ್ನಪೂರ್ಣ ಮೇಟಿರವರು, ಕುಂಬಾರ ಗುಂಡಯ್ಯನವರ ಸಮಗ್ರ ಜೀವನ ಚರಿತ್ರಯನ್ನು ಅರ್ಥಪೂರ್ಣವಾಗಿ ವಿವರಿಸುತ್ತಾ, ಅವರ ಕಾಯಕ ಮತ್ತು ಲಿಂಗಪೂಜೆ ನಿಷ್ಠೆ ಪ್ರಾಮಾಣಿಕತೆ ಅವರನ್ನು ದಿಟ್ಟ ಕಾಯಕದ ನಾಯಕ ಎಂದು ಪ್ರಸಿದ್ಧಿ ಪಡೆದವರು ಎಂದು ಹೇಳಿದರು.
ಕುಂಬಾರ ಗುಂಡಯ್ಯ ಮತ್ತು ಅವರ ಧರ್ಮಪತ್ನಿ ಶರಣೆ ಕೆಥಲದೇವಿಯವರು ಭಾಲ್ಕಿ ಪಟ್ಟಣದಲ್ಲಿ ಮಣ್ಣಿನ ಮಡಿಕೆ ಮತ್ತು ಕುಡಿಕೆ ತಯಾರಿಸುತ್ತಾ, ಲಿಂಗಪೂಜೆ, ಜಂಗಮ ದಾಸೋಹ ನಡೆಸುತ್ತಾ ಕೈಲಾಸಕಿಂತ ಕಾಯಕವೇ ಶ್ರೇಷ್ಠ ಎಂದು ಸಾರಿದವರು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶರಣ ಶ್ರೀ ಪರಮೇಶ್ವರ್ ಸಾಲಿಮಠರವರು, ಮಣ್ಣೆತ್ತಿನ ಅಮಾವಾಸ್ಯೆಯ ಪ್ರಾಮುಖ್ಯತೆಯನ್ನು ತಿಳಿಸುತ್ತಾ, ಬಸವಾದಿ ಶರಣರ ಆಶಯದಂತೆ ಯಾವ ಕಾಯಕವಾದರೂ ಅತ್ಯಂತ ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡುತ್ತಾ ಶರಣರ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ ಎಂದು ಕರೆಕೊಟ್ಟರು.
ಈ ಕಾರ್ಯಕ್ರಮದ ಶರಣ ಶ್ರೀ ರಾಚನಗೌಡ ಕೋಳೂರು ಮಾತನಾಡುತ್ತ, ಕುಂಬಾರ ಗುಂಡಯ್ಯನವರನ್ನು ಬಿದಿರು ಬೊಂಬೆಯ ಪ್ರತಿರೂಪದಲ್ಲಿ ಇಂದಿಗೂ ನಾವೆಲ್ಲ ಹೊಲ ಗದ್ದೆಗಳಲ್ಲಿ ಕಾಣಬಹುದು ಮತ್ತು ನಮ್ಮ ರೈತರು ಹೊಲಗದ್ದೆಯ ಬೆಳೆಯನ್ನು ಗುಂಡಯ್ಯನವರು ಸಂರಕ್ಷಿಸುತ್ತಾರೆ ಎಂಬ ನಂಬಿಕೆ ಇಟ್ಟಿದ್ದಾರೆ ಎಂದು ತಿಳಿಸಿದರು.
ವಚನ ಗಾಯನ ಮತ್ತು ಸಾಮೂಹಿಕ ಬಸವ ಪ್ರಾರ್ಥನೆಯನ್ನು ರಾಘವೇಂದ್ರ ಆಶಾಪುರ ಅವರ ಶಿಷ್ಯವೃಂದ ಹಾಗೂ ಅಕ್ಕನ ಬಳಗದ ಸದಸ್ಯರು ನಡೆಸಿಕೊಟ್ಟರು.
ವಿಜಯಕುಮಾರ್ ಸಜ್ಜನ್, ಉಪಾಧ್ಯಕ್ಷರು ಬಸವ ಕೇಂದ್ರ ಸ್ವಾಗತ ಕೋರಿದರು. ಚನ್ನಬಸವಣ್ಣ ಮಹಾಜನ್ ಶೆಟ್ಟಿ, ಕಾರ್ಯದರ್ಶಿಗಳು, ಬಸವ ಕೇಂದ್ರ, ರಾಯಚೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೆಂಕಣ್ಣ ಆಶಾಪೂರ ವಂದಿಸಿದರು ಹಾಗೂ ಶಿವಕುಮಾರ ಮಾಟೂರ ನಿರೂಪಿಸಿದರು.