
ಬೀದರ್:ಮಾ.12: ಜಿಲ್ಲೆಯ ಕುಂಬಾರ ವೃತ್ತಿ ಮಾಡುತ್ತಿದ್ದವರಿಗೆ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಇತ್ತೀಚೆಗೆ ಹತ್ತು ದಿವಸ ಕುಂಬಾರಿಕೆ ಕುರಿತು ತರಬೇತಿ ನೀಡಲಾಯಿತು.
ತರಬೇತಿ ಪಡೆದು ಇಲ್ಲಿಗೆ ಆಗಮಿಸಿದವರಿಗೆ ಗುರುವಾರ ಪ್ರಮಾಣಪತ್ರ ವಿತರಣೆ ಮಾಡಲಾಯಿತು. ಪ್ರಮಾಣಪತ್ರ ವಿತರಿಸಿ ಮಾತನಾಡಿದ ಜಿಲ್ಲಾ ಕೈಗಾರಿಕೆ ಜಂಟಿ ನಿರ್ದೇಶಕಿ ಸುರೇಖಾ, ಜಿಪಂನ ಗ್ರಾಮೀಣ ಕೈಗಾರಿಕೆ ಅನುದಾನದಲ್ಲಿ ತರಬೇತಿ ನೀಡಲಾಗಿದೆ. ಕುಂಬಾರ ವೃತ್ತಿಯಲ್ಲಿ ಹೊಸತನ ಮೈಗೂಡಿಸಿಕೊಳ್ಳಲು ತರಬೇತಿ ನೀಡಲಾಗಿದ್ದು, ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿಯ 2021-22ನೇ ಸಾಲಿನ ಅನುದಾನದಲ್ಲಿ ಜಿಲ್ಲೆಯ 60 ಜನರಿಗೆ ತರಬೇತಿ ನೀಡಲಾಗಿದೆ. ಖಾನಾಪುರಕ್ಕೆ ಹೋಗಿ-ಬರಲು ಪ್ರಯಾಣ ಭತ್ಯೆ ನೀಡಲಾಗಿದೆ. ಕುಂಬಾರ ವೃತ್ತಿಯಲ್ಲಿ ಹೊಸತನ ತರಲು ಈ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಇಲಾಖೆ ಉಪ ನಿರ್ದೇಶಕ ರಮೇಶ ಮಠಪತಿ, ಬಸವರಾಜ ಕುಂಬಾರ, ಬಾಬುರಾವ್ ಕುಂಬಾರ ಕೊಳಾರ್, ಮನೋಜಕುಮಾರ, ಶಂಕರರಡ್ಡಿ ಇತರರರಿದ್ದರು.