ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ ಭಗವಂತ ಖೂಬಾ

ಭಾಲ್ಕಿ, ಜು. 15; ಬೀದರ್ ಜಿಲ್ಲೆ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ನಾನು ಆರೋಪಿಸಿದ ಕೂಡಲೇ, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ ಎಂಬಂತೆ ಆತುರದ ಪ್ರತಿಕ್ರಿಯೆ ನೀಡಿರುವ ಸಂಸದ ಭಗವಂತ ಖೂಬಾ, ನಾನು ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದ ಕಾಲದಲ್ಲಿ ಕಮಿಷನ್ ಪಡೆದು ಹೆದ್ದಾರಿಗೆ ಅನುಮೋದನೆ ನೀಡಿದ್ದಾಗಿ ಸುಳ್ಳು ಆರೋಪ ಮಾಡಿರುವುದು ಅವರ ಅಜ್ಞಾನದ ಪ್ರದರ್ಶನವಾಗಿದೆ ಎಂದು ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅನುಕಂಪ ವ್ಯಕ್ತಪಡಿಸಿದ್ದಾರೆ.

ತಾವು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಕಾಮಗಾರಿಯು ಕಳಪೆ ಮಟ್ಟದಿಂದ ಕೂಡಿರುವ ಬಗ್ಗೆ ಸ್ವತಃ ದೂರು ನೀಡಿದ್ದು ತನಿಖೆಗೆ ಆದೇಶಿಸುವಂತೆ ಕೋರಿದ್ದು ಸಂಸತ್ ಸದಸ್ಯರಾದ ಖೂಬಾ ಅವರಿಗೆ ಚೆನ್ನಾಗಿಯೇ ತಿಳಿದಿದ್ದರೂ ಮೊಸರನ್ನ ತಿಂದ ಮಂಗ ಮೇಕೆ ಬಾಯಿಗೆ ಒರೆಸಿತು ಎಂಬಂತೆ ತಮ್ಮ ತಪ್ಪನ್ನು ಮತ್ತೊಬ್ಬರ ಹೆಗಲ ಮೇಲೆ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಈ ಮೂರು ವರ್ಷದ ಅವಧಿಯಲ್ಲಿ ಕಳಪೆ ಕಾಮಗಾರಿ ಬಗ್ಗೆ ಸಂಸದರು ಒಂದೇ ಒಂದು ದೂರು ಕೊಟ್ಟಿದ್ದಾರೆಯೇ? ಎಂದು ಪ್ರಶ್ನಿಸಿರುವ ಅವರು, ಇವರದೇ ಸರ್ಕಾರ ಕೇಂದ್ರ ಹಾಗೂ ರಾಜ್ಯದಲ್ಲಿದೆ ಖೂಬಾಗೆ ನೈತಿಕತೆ ಇದ್ದರೆ, ಈ ಬಗ್ಗೆ ತನಿಖೆಗೆ ಆದೇಶಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಿ ಎಂದು ತಿರುಗೇಟು ನೀಡಿದ್ದಾರೆ.

ಉಲ್ಟಾ ಚೋರ್ ಕೊತ್ವಾಲ್ ಕೋ ಡಾಟಾ….

ಉಲ್ಟಾ ಚೋರ್ ಕೊತ್ವಾಲ್ ಕೋ ಡಾಟಾ ಎಂಬುದು ನಮ್ಮ ಕಡೆ ಜನಪ್ರಿಯ ಗಾದೆ. ಅದೇ ರೀತಿ ಬಿಜೆಪಿ ಸರ್ಕಾರದಲ್ಲಿ ಆಗಿರುವ ಎಲ್ಲ ಅಕ್ರಮಗಳನ್ನು ಕಾಂಗ್ರೆಸ್ ಹೆಗಲಿಗೆ ಕಟ್ಟುವ ಪ್ರಯತ್ನವನ್ನು ಸಂಸದರು ಮಾಡುತ್ತಿದ್ದಾರೆ ಇದು ಅವರಿಗೆ ಕೆಟ್ಟ ಚಾಳಿಯಾಗಿ ಹೋಗಿದೆ ಎಂದು ಈಶ್ವರ ಖಂಡ್ರೆ ಕಟುವಾಗಿ ಟೀಕಿಸಿದ್ದಾರೆ. .

ರಾಷ್ಟ್ರೀಯ ಹೆದ್ದಾರಿ 50ರ ಕಾಮಗಾರಿ ವಾಸ್ತವವಾಗಿ ಮೂರು ವರ್ಷದ ಕೆಳಗೆ ಮುಗಿಯಬೇಕಾಗಿತ್ತು ಆದರೆ ಇನ್ನೂ ಕುಂಟುತ್ತಾ ತೆವಳುತ್ತಾ ಸಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಕಳೆದ 3 ವರ್ಷದಿಂದ ಯಾರ ಸರ್ಕಾರ ಆಡಳಿತದಲ್ಲಿದೆ. ಈಗ ಹೆದ್ದಾರಿ ತೀರಾ ಕಳಪೆ ಕಾಮಗಾರಿಯಿಂದ ಕಿತ್ತು ಬರುತ್ತಿದ್ದು, ರಸ್ತೆಯಲ್ಲಾ ಧೂಳುಮಯವಾಗಿದೆ. ಈ ಹಿಂದೆ ಇದ್ದ ರಸ್ತೆಯೇ ಗುಣಮಟ್ಟದಿಂದ ಕೂಡಿತ್ತು. ಆದರೆ ಈಗ ಇದ್ದ ರಸ್ತೆಯೂ ತೀರಾ ಹದಗೆಟ್ಟು ಹೋಗಿದೆ. ಇದಕ್ಕೆ ಬಿಜೆಪಿ ಸರ್ಕಾರ ಹೊಣೆಯಲ್ಲವೇ. ಈ ಹೆದ್ದಾರಿಯ ಕುರಿತಂತೆ ಟೆಂಡರ್ ಯಾವಾಗ ಕರೆಯಲಾಯಿತು. ಯಾವ ಯಾವ ವರ್ಷ ಎಷ್ಟು ಎಷ್ಟು ಹಣ ಬಿಡುಗಡೆ ಮಾಡಲಾಯಿತು, ಎಷ್ಟು ವಿಳಂಬವಾಗಿದೆ. ವಿಳಂಬ ಮಾಡಿದ ಗುತ್ತಿಗೆದಾರರ ವಿರುದ್ಧ ಕೈಗೊಂಡಿರುವ ಕ್ರಮ ಏನು. ಕಳಪೆ ಕಾಮಗಾರಿಯ ಬಗ್ಗೆ ಗುಣಮಟ್ಟ ಪರೀಕ್ಷೆ ವರದಿ ತರಿಸಿಕೊಳ್ಳಲಾಗಿದೆಯೇ ಎಂಬ ಎಲ್ಲ ಅಂಶಗಳನ್ನು ಒಳಗೊಂಡ ಶ್ವೇತಪತ್ರ ಹೊರಡಿಸಲಿ. ಆಗ ಹಾಲು ಯಾವುದು ನೀರು ಯಾವುದು ಎಂಬುದು ಸಾಫ್ ಸೀದಾ ಆಗುತ್ತದೆ ಎಂದು ಈಶ್ವರ ಖಂಡ್ರೆ ಸವಾಲು ಹಾಕಿದ್ದಾರೆ.

ತಾವು ಒಬ್ಬ ಕೇಂದ್ರ ಸಚಿವರಾಗಿ ಗುತ್ತಿಗೆದಾರರ ರಕ್ಷಣೆಗೆ ನಿಂತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ನನ್ನ ನೆನಪಿನ ಶಕ್ತಿಯ ಬಗ್ಗೆ ಭಗವಂತ ಖೂಬಾ ಪ್ರಶ್ನಿಸಿದ್ದು, ನಮ್ಮ ಪರಮಪೂಜ್ಯ ತಾಯಿಯವರ ಪುಣ್ಯ ತಿಥಿಯ ದಿನ ಮಾತ್ರ ನಮ್ಮ ಮನೆಗೆ ಬಂದಿದ್ದು, ಉಳಿದಂತೆ ಎಂದೂ ನಮ್ಮ ಮನೆ ಬಾಗಿಲು ಕಾದಿಲ್ಲ ಎಂದು ಹೇಳಿದ್ದಾರೆ. ನಾನು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವುದಾಗಿ ಹೇಳಿಕೆ ನೀಡಿದ್ದಾರೆ. ನಾನು ಎಲ್ಲಿಯೂ ಭಗವಂತ ಖೂಬಾ ನನ್ನ ಮನೆ ಬಾಗಿಲು ಕಾದಿದ್ದಾರೆ ಎಂದು ಹೇಳಿಲ್ಲ. ನಾನು ನೀಡದೆ ಇರುವ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಖೂಬಾಗೇ ಬುದ್ಧಿ ಸ್ವಾಧೀನದಲ್ಲಿ ಇದೆಯೇ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.

ಕೊಟ್ಟ ಕುದುರೆಯನೇರಲರಿಯದವ….

ಅಲ್ಲಮ ಪ್ರಭುಗಳು ಕೊಟ್ಟ ಕುದುರೆಯನೇರಲರಿಯದವ ಶೂರನೂ ಅಲ್ಲ, ವೀರನೂ ಅಲ್ಲ ಎಂದು ಹೇಳಿದ್ದಾರೆ. ಸ್ವತಃ ಕೇಂದ್ರದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿದ್ದರೂ, ರಾಜ್ಯಕ್ಕೆ ಮತ್ತು ಅವರದೇ ಕ್ಷೇತ್ರಕ್ಕೆ ಸೂಕ್ತ ಪ್ರಮಾಣದಲ್ಲಿ ರಸಗೊಬ್ಬರವನ್ನು ತರಲೂ ಸಾಧ್ಯವಾಗದೆ ಕೊಟ್ಟ ಕುದುರೆಯನು ಏರಲು ಅರಿಯದ ಭಗವಂತ ಖೂಬಾ ಹೀಗೆಲ್ಲಾ ಅಪಲಾಪ ಮಾಡುತ್ತಿರುವುದನ್ನು ನೋಡಿದರೆ, ಅವರ ದುಸ್ಥಿತಿ ಕಂಡು ಕನಿಕರ ಮೂಡುತ್ತದೆ ಎಂದು ಈಶ್ವರ ಖಂಡ್ರೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೀದರ್ ಜಿಲ್ಲೆಯ ಬ್ರಿಮ್ಸ್ ಆಸ್ಪತ್ರಯಲ್ಲಿ ಡಿ-ದರ್ಜೆ ನೌಕರರ, ಸುಚಿತ್ವ ಕಾಪಾಡುವ ನೌಕರರ ಮತ್ತು ನೈರ್ಮಲ್ಯ ಸೇವೆಯ ಗುತ್ತಿಗೆಯನ್ನು ಪಡೆದುಕೊಂಡಿರುವವರು ಯಾರು?ಈ ನೌಕರರಿಗೆ ಸರೆಯಾಗಿ ವೇತನ ಪಾವತಿ ಆಗುತ್ತಿದೆಯೇ? ಈ ಡಿ-ದರ್ಜೆ ನೌಕರರಿಗೆ ಪಿ.ಎಫ್. ಮತ್ತು ಇ.ಎಸ್.ಐ. ಸೌಲಭ್ಯ ನೀಡಲಾಗಿದೆಯೇ? ಈ ಗುತ್ತಿಗೆಯಲ್ಲಿ ನಿಮ್ಮ ಕುಮ್ಮಕ್ಕಿನಿಂದ ಸಫಾಯಿ ಕರ್ಮಚಾರಿಗಳ ಲಕ್ಷಾಂತರ ಹಣ ಲೂಟಿ ಹೊಡೆಯುತ್ತಿರುವವರು ಯಾರು ಎಂಬುದನ್ನು ಭಗವಂತ ಖೂಬಾ ರವರು ಬೀದರ್ ಜಿಲ್ಲೆಯ ಜನರಿಗೆ ತಿಳಿಸಲಿ ಎಂದು ಈಶ್ವರ ಖಂಡ್ರೆ ಸವಾಲು ಹಾಕಿದ್ದಾರೆ.

ರೈಲ್ವೆ ಕಳಪೆ ಕಾಮಗಾರಿಗೂ ಶಾಸಕರೇ ಹೊಣೆಯೇ?

ಜಿಲ್ಲೆಯಾದ್ಯಂತ ನಡೆದಿರುವ ಮತ್ತು ನಡೆಯುತ್ತಿರುವ ರೈಲ್ವೆ ಕಾಮಗಾರಿಗಳು ಮತ್ತು ಕೆಳ ಸೇತುವೆ ಕಾಮಗಾರಿಗಳು ಅತ್ಯಂತ ಕಳಪೆ ಮಟ್ಟದಿಂದ ಕೂಡಿವೆ. ಇದು ಬರಿಗಣ್ಣಿಗೇ ಗೋಚರಿಸುತ್ತಿದ್ದರೂ, ಸಂಸದರಾದ ಖೂಬಾ ಕಣ್ಣು ಮುಚ್ಚಿ ಕುಳಿತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಅದಕ್ಕೂ ಶಾಸಕರು ಹೊಣೆ ಎಂದು ಜಾರಿಕೊಂಡರೂ ಅಚ್ಚರಿ ಇಲ್ಲ. ಇದು ಹೊಣಗೇಡಿತನದ ಪರಮಾವಧಿ ಎಂದು ಈಶ್ವರ ಖಂಡ್ರೆ ತಿರುಗೇಟು ನೀಡಿದ್ದಾರೆ.

ತಮ್ಮ ಹೊಣೆಗಾರಿಕೆ ತಪ್ಪಿಸಿಕೊಳ್ಳಲು ಗಾಳಿಯಲ್ಲಿ ಗುಂಡು ಹಾರಿಸುವುದನ್ನು ಬಿಟ್ಟು, ದೊರೆತಿರುವ ಅಧಿಕಾರ ಬಳಸಿಕೊಂಡು ಜನಸೇವೆ ಮಾಡಲಿ, ನಾನು ವೈಯಕ್ತಿಕವಾಗಿ ಯಾವುದೇ ರೀತಿಯ ಟೀಕೆ ಮಾಡಿದವನಲ್ಲ. ವೈಯಕ್ತಿಕ ಟೀಕೆ ಮಾಡುವುದು ತಮ್ಮ ಚಾಳಿ. ಜಿಲ್ಲೆಯ ಜನರ, ರೈತರ ಸಂಕಷ್ಟ ನಿವಾರಿಸಲಿ, ಬಡವರಿಗೆ ವಸತಿ ಸೇರಿದಂತೆ ಯೋಜನೆಗಳ ಪ್ರಯೋಜನ ದೊರಕಿಸಲಿ ಅದು ಬಿಟ್ಟು, ಬಡವರಿಂದ ಪ್ರಯೋಜನ ಕಸಿದುಕೊಳ್ಳುವ (6 ಸಾವಿರ ಪರಿವಾರದ ವಸತಿ ಭಾಗ್ಯ ಕಸಿದುಕೊಂಡಿರುವ) ಕಾರ್ಯ ಮಾಡದಿರಲಿ. ಈ ಶಾಪ ಅವರಿಗೆ ತಟ್ಟದೇ ಇರದು ಎಂದು ಹೇಳಿದ್ದಾರೆ.
ಕೊರೋನಾ ಸಂದರ್ಭದಲ್ಲಿಯೂ ಸಹ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ತೀವ್ರವಾಗಿ ಕಾಡಿತು. ಜನ ಬೆಡ್ ಸಿಗದೆ ರಸ್ತೆಯಲ್ಲಿ ನರಳುವಂತಾಯಿತು. ರೆಮ್ದೆಸಿವರ್ ಔಷಧ ಲಭ್ಯವಿಲ್ಲದಿದ್ದರೂ ಸಹ ಸಾಕಷ್ಟು ಲಭ್ಯವಿದೆ ಎಂದು ಸುಳ್ಳು ಹೇಳುತ್ತಾ ಸಂಸದರು ಕಾಲ ಕಳೆದರು. ಬೀದರ ಜಿಲ್ಲೆಯಲ್ಲಿ ಸಾವಿರಾರು ಜನರು ಸೂಕ್ತ ಚಿಕಿತ್ಸೆ, ಸೌಲಭ್ಯ, ಔಷಧ ಸಿಗದೆ ಮೃತಪಟ್ಟಿದ್ದಾರೆ. ಎಷ್ಟೋ ಬಡ ಕುಟುಂಬಗಳು ಅನಾಥವಾಗಿವೆ. ಇಂತಹ ಕುಟುಂಬದ ಜವಾಬ್ದಾರಿ ನೀವೇ ವಹಿಸಿಬೇಕು. ಇಂತಹ ದುರಹಂಕಾರ ದುರ್ವರ್ತನೆ ಮನೋಭಾವ, ಅಧಿಕಾರದ ಮದಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದೂ ಈಶ್ವರ ಖಂಡ್ರೆ ತಿಳಿಸಿದ್ದಾರೆ.