ಕುಂದು ಕೊರತೆ ಸಭೆ : ಬೆಂಬಲ ಬೆಲೆಗೆ ರೈತರು ಒತ್ತಾಯ

ರಾಯಚೂರು,ಜ.೧೩- ಮಾರುಕಟ್ಟೆಯಲ್ಲಿ ಹತ್ತಿ ದರ ಕುಸಿತದಿಂದ ರೈತರಿಗೆ ನಷ್ಟವಾಗುತ್ತಿದೆ ರೈತರಿಗೆ ಅನುಕೂಲಕ್ಕಾಗಿ ಪ್ರತಿ ಕ್ವಿಂಟಲ್ ೯೫೦೦ ರೂ ದರ ನಿಗದಿ ಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ರೈತರು ಬೇಡಿಕೆ ಮುಂದಿಟ್ಟರು. ಅವರಿಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹತ್ತಿ ಖರೀದಿ ಕುಂದು ಕೊರತೆ ಸಭೆ ಉದ್ದೇಶಿಸಿ ಮಾತನಾಡಿದರು.
ಡಿಸೆಂಬರ್ ಆರಂಭದಲ್ಲಿ ಪ್ರತಿ ಕ್ವಿಂಟಲ್ ೯೫೦೦ ರೂ ಹತ್ತಿ ಖರೀದಿ ಮಾಡಲಾಗಿದೆ. ಏಕಏಕಾಗಿ ಮಾರುಕಟ್ಟೆಯಲ್ಲಿ ಹತ್ತಿ ದರ ಕುಸಿತದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ರೈತರ ಸಮಸ್ಯೆಗೆ ಜಿಲ್ಲಾಡಳಿತ ಮುಂದಾಗಬೇಕು ಎಂದ ಅವರು
ಪ್ರತಿ ಎಕರೆ ೩೦ ರಿಂದ ೫೦ ಸಾವಿರ ಖರ್ಚು ಮಾಡಲಾಗಿದೆ. ಅತಿಯಾದ ಮಳೆಯಿಂದ ಇಳುವರಿ ಕಡಿಮೆಯಾಗಿದೆ. ಹತ್ತಿ ದರ ಕುಸಿತದಿಂದ ಖರ್ಚು ಮಾಡಿದ ಹಣವನ್ನು ತೆಗೆಯಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು.ಹೀಗಾಗಿ ಸರಕಾರ ಇಂತಹ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣ ಬೆಂಬಲ ಬೆಲೆಗೆ ಖರೀದಿ ಮಾಡಬೇಕು.ಪ್ರತಿ ತಾಲೂಕುಗಳಲ್ಲಿ ಶಾಶ್ವತ ಹತ್ತಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ಬೆಂಬಲ ಬೆಲೆಗೆ ಖರೀದಿ ಮಾಡುವಂತೆ ರೈತರು ಒತ್ತಾಯಿಸಿದರು. ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಮಾತನಾಡುತ್ತಾ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಬಲ ಬೆಲೆ ನಿಗದಿ ಪಡಿಸಲು ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಅಚ್ಚುತರೆಡ್ಡಿ, ಉಪಾಧ್ಯಕ್ಷ ಬೆಲ್ಲಂ ನರಸರೆಡ್ಡಿ ಕೃಷಿ ಜಂಟಿ ಅಧಿಕಾರಿ ದೇವಿಕಾ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ರೈತರು ಸೇರಿದಂತೆ ಉಪಸ್ಥಿತರಿದ್ದರು.