ಕುಂದು ಕೊರತೆ ನೇರ ಸಂವಾದ

ಗದಗ,ಜು.26:ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗವು ಪೌರಕಾರ್ಮಿಕರ ಸಮಸ್ಯೆಗಳಿಗೆ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪೌರಕಾರ್ಮಿಕರಿಗೆ ಸರ್ಕಾರದ ಸೌಲಭ್ಯ, ಸವಲತ್ತುಗಳನ್ನು ದೊರಕಿಸಿಕೊಡಲು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಆಯೋಗ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಆಯೋಗದ ಅಧ್ಯಕ್ಷ ಎಂ.ಶಿವಣ್ಣ(ಕೋಟೆ) ಅವರು ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ ಸಭಾ ಭವನದಲ್ಲಿ ಸೋಮವಾರ ಸಫಾಯಿ ಕರ್ಮಚಾರಿಗಳ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಹಯೋಗದಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರು, ಪೌರಕಾರ್ಮಿಕರು ಮತ್ತು ಗುರುತಿಸಲ್ಪಟ್ಟ ಮ್ಯಾನುವಲ್ ಸ್ಕ್ಯಾವೇಂಜರಗಳ ಹಾಗೂ ಮುಖಂಡರುಗಳ ಜೊತೆ ಕುಂದು ಕೊರತೆಗಳ ಕುರಿತು ಜರುಗಿದ ನೇರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೌರಕಾರ್ಮಿಕರನ್ನು ಜನ ಸಾಮಾನ್ಯರು ಹಾಗೂ ಅಧಿಕಾರಿಗಳು ಅತ್ಯಂತ ಗೌರವದಿಂದ ಕಾಣಬೇಕು. ಭಾರತ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪೌರಕಾರ್ಮಿಕರ ಪಾದ ಪೂಜೆ ಮಾಡುವದರ ಮೂಲಕ ಪೌರಕಾರ್ಮಿಕರನ್ನು ಗೌರವಿಸಿದ್ದಾರೆ. ಅದರಂತೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಹ ಪೌರಕಾರ್ಮಿಕರಿಗೆ ಸರ್ಕಾರದಿಂದ ಹಲವಾರು ಸವಲತ್ತುಗಳನ್ನು ನೀಡಲು ಮುಂದಾಗಿರುವದನ್ನು ನಾವೆಲ್ಲ ಗಮನಿಸಬೇಕು. ಪೌರಕಾರ್ಮಿಕರೆಂದರೆ ನಮ್ಮ ಸುತ್ತಲಿನ ಪ್ರದೇಶವನ್ನು ಶುಚಿಗೊಳಿಸುವ ಕಾರ್ಮಿಕರು ಅವರಿಗೆ ಸರ್ಕಾರದಿಂದ ದೊರೆಯುವ ಹಲವಾರು ಸೌಲಭ್ಯಗಳನ್ನು ನೀಡಲು ಅಧಿಕಾರಿಗಳು ಮುಂದಾಗಬೇಕು ಎಂದರು.