ಕುಂದು ಕೊರತೆ ಅರ್ಜಿ-ಸಮಸ್ಯೆ ಪರಿಹಾರಕ್ಕೆ ಸೂಚನೆ

ಮಾಲೂರು.ಸೆ೧೩:ಪಟ್ಟಣದ ತಾಲೂಕು ಪಂಚಾಯಿತಿಯ ಸಾಮರ್ಥ್ಯ ಸೌದ ಸಭಾಂಗಣದಲ್ಲಿ ಕೋಲಾರ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳಿಂದ ನಡೆದ ಸಾರ್ವಜನಿಕ ಕುಂದು ಕೊರತೆಗಳ ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ೨೯ ಅರ್ಜಿಗಳು ಸ್ವೀಕೃತಗೊಂಡಿದ್ದು ಕೆಲವು ಅರ್ಜಿಗಳನ್ನು ಸ್ಥಳದಲ್ಲಿಯೇ ಹಾಜರಿದ್ದ ಅಧಿಕಾರಿಗಳು ಪರಿಶೀಲನೆ ನಡೆಸಿ ಸಮಸ್ಯೆಗಳನ್ನು ಬಗೆ ಹರಿಸಲು ಸೂಚಿಸಲಾಗಿದೆ ಎಂದು ಕೋಲಾರ ಜಿಲ್ಲಾ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಆಂಜಿನಪ್ಪ ಹೇಳಿದರು.
ಕೋಲಾರ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಆದೇಶದ ಮೇರೆಗೆ ಮಾಲೂರು ಪಟ್ಟಣದಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಸಭೆ ಏರ್ಪಡಿಸಲಾಗಿತ್ತು, ಸಾರ್ವಜನಿಕರು ಸಭೆಗೆ ಆಗಮಿಸಿ ಕಂದಾಯ ಇಲಾಖೆ ಸೇರಿದ ೧೩ ಅರ್ಜಿಗಳು ಪುರಸಭೆ ೨, ಅರಣ್ಯ ಇಲಾಖೆ ೧, ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ೧, ಗ್ರಂಥಾಲಯ ೧, ತಾಲೂಕು ಪಂಚಾಯಿತಿಗೆ ಸಂಬಂಧಿಸಿದ ೬, ಭೂಮಾಪನ ಇಲಾಖೆ ೩, ವಿವಿಧ ರೀತಿಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ನೀಡಿದ್ದು, ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಕೆಲವು ಅರ್ಜಿಗಳಿಗೆ ಸ್ಥಳದಲ್ಲಿಯೇ ಹಾಜರಿದ ಅಧಿಕಾರಿಗಳು ಬಗೆಹರಿಸಲು ಸೂಚಿಸಲಾಗಿದೆ.
ಸಮಾಜದಲ್ಲಿ ಭ್ರಷ್ಟಾಚಾರ ಕಡಿವಾಣ ಹಾಕಿ ಭ್ರಷ್ಟಾಚಾರ ರಹಿತ ಸೇವೆಗಾಗಿ ಲೋಕಾಯುಕ್ತ ಪೊಲೀಸ್ ಸಾರ್ವಜನಿಕರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ನೌಕರರಲ್ಲಿ ಜಾಗೃತಿ ಮೂಡಿಸಿ ಕುಂದು ಕೊರತೆಗಳ ಪರಿಶೀಲನೆ ಸಭೆಗಳನ್ನು ನಡೆಸುತ್ತಿದ್ದು, ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುವ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಸರ್ಕಾರಿ ಕೆಲಸ ದೇವರ ಕೆಲಸವೆಂದು ಭಾವಿಸಿ ಸಾರ್ವಜನಿಕರು ಕೆಲಸ ಕಾರ್ಯಗಳಿಗೆ ಕಚೇರಿಗಳಿಗೆ ಆಗಮಿಸಿದಾಗ ಅವರನ್ನು ಅಲಿಸದೆ ಅವರಿಂದ ಏನನ್ನು ಅಪೇಕ್ಷಿಸದೆ ಸಕಾಲಕ್ಕೆ ಅವರ ಕೆಲಸ ಕಾರ್ಯಗಳನ್ನು ಕಾನೂನು ಚೌಕಟ್ಟಿನಲ್ಲಿ ಮಾಡಿಕೊಡಬೇಕು, ಅಧಿಕಾರಿಗಳು ಮತ್ತು ನೌಕರರ ಮೇಲೆ ದೂರುಗಳು ಬಂದಲ್ಲಿ ಲೋಕಾಯುಕ್ತ ಪೊಲೀಸ್ ಇಲಾಖೆಯು ಕಾನೂನು ಚೌಕಟ್ಟಿನಲ್ಲಿ ಕ್ರಮ ವಹಿಸುತ್ತದೆ.
ಸಾರ್ವಜನಿಕರು ಸಹ ಯಾವುದೇ ಇಲಾಖೆಯ ಅಧಿಕಾರಿಗಳು ನೌಕರರು ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತಮ್ಮಿಂದ ಏನಾದರೂ ಹಣ ಕೇಳಿದ್ದಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಹೇಳಿದರು.