ಕುಂದುವಾಡ ಕೆರೆಯಲ್ಲಿ ಗುಪ್ತಚರ ಇಲಾಖೆ ಅಧಿಕಾರಿಗಳ ವಾಕಿಂಗ್

ದಾವಣಗೆರೆ.ನ.೧೩: ಇತ್ತೀಚಿನ ದಿನಗಳಲ್ಲಿ ಒತ್ತಡದ ನಡುವೆಯೇ ಎಲ್ಲರೂ ಕಾರ್ಯನಿರ್ವಹಿಸುತ್ತಾರೆ. ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ. ಇದಕ್ಕಾಗಿ ಕೆಲವರು ದೈಹಿಕ ಕಸರತ್ತು ನಡೆಸಿದರೆ, ಮತ್ತೆ ಕೆಲವರು ವಾಕಿಂಗ್ ಮಾಡುತ್ತಾರೆ. ಯಾವಾಗಲೂ ಒತ್ತಡದಲ್ಲಿಯೇ ಕಾರ್ಯನಿರ್ವಹಣೆ ಮಾಡುವ ಗುಪ್ತಚರ ಇಲಾಖೆಯ ಸಿಬ್ಬಂದಿಗೆ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಸೂಚಿಸಲಾಗಿದೆ. ಜೊತೆಗೆ ಬೆಳಗಿನ ನಡಿಗೆ- ಆರೋಗ್ಯದ ಕಡೆಗೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಇನ್ನು ದಾವಣಗೆರೆಯ ಕುಂದುವಾಡ ಕೆರೆ ಪ್ರದೇಶದಲ್ಲಿ ಬೆಳಿಗ್ಗೆ 6.30ರಿಂದ ಶುರುವಾದ ಬೆಳಗಿನ ನಡಿಗೆ ಎಂಟೂವರೆ ಗಂಟೆಯವರೆಗೆ ನಡೆಯಿತು. ನಗರದ ಕುಂದವಾಡ ಕೆರೆಯ ಏರಿ ಮೇಲೆ ರಾಜ್ಯ ಗುಪ್ತಚರ ಇಲಾಖೆ ಹಾಗೂ ನಾಗರಿಕ ಹಕ್ಕು ನಿರ್ದೇಶನಾಲಯದ ಅಧಿಕಾರಿ ಮತ್ತು ಸಿಬ್ಬಂದಿ 10 ಕಿಲೋ ಮೀಟರ್ ನಡೆಯುವ ಮೂಲಕ ವಾಯುವಿಹಾರ ನಡೆಸಿದರು. ಗುಪ್ತದಳ ಎಡಿಜಿಪಿ ಅವರ ಆದೇಶದ ಮೇರೆಗೆ ವಾಕಿಂಗ್ ನಡೆಸಲಾಯಿತು.ಕುಂದವಾಡ ಕೆರೆಯನ್ನು ಎರಡು ಸುತ್ತು ಹಾಕಿ ‌ಹತ್ತು ಕಿಲೋಮೀಟರ್ ದೂರವನ್ನು ಕ್ರಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಬಳಿಕ ರಿಲ್ಯಾಕ್ಸ್ ಆದರು. ಈ ಕಾರ್ಯಕ್ರಮದಲ್ಲಿ ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್ಪಿ  ಗೋಪಾಲ್ ಅವರು ಚಾಲನೆ ನೀಡಿದರು. ರಾಜ್ಯ ಗುಪ್ತಚರ ಇಲಾಖೆ ಡಿವೈಎಸ್ಪಿ ಪ್ರಹ್ಲಾದ್ ಎಸ್. ಕೆ., ಸಬ್ ಇನ್ ಸ್ಪೆಕ್ಟರ್ ಹೆಚ್.ಜಗದೀಶ್, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಇನ್ ಸ್ಪೆಕ್ಟರ್ ಕೃಷ್ಣ ನಾಯ್ಕ್ , ಸಬ್ ಇನ್ ಸ್ಪೆಕ್ಟರ್ ಉಮೇಶ್ ಬಾಬು, ಪಾಲಾಕ್ಷಪ್ಪ, ನಾಗರಾಜ್  ಭಾಗವಹಿಸಿದ್ದರು.