ಕುಂದುಕೊರತೆಗಳಿಗೆ ಅಧಿಕಾರಿ, ಸಿಬ್ಬಂದಿಗಳು ಸ್ಪಂದಿಸಿ

ಬಾಗಲಕೋಟೆ, ಜು. 28 : ಸಾರ್ವಜನಿಕರಿಂದ ಸ್ವೀಕೃತವಾಗುವ ಅರ್ಜಿಗಳನ್ನು ಆಯಾ ಇಲಾಖೆ ಅಧಿಕಾರಿಗಳು ಇತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ತ್ವರಿತವಾಗಿ ವಿಲೇವಾರಿ ಮಾಡುವ ಮೂಲಕ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಪಿ ಸುನೀಲಕುಮಾರ ಸೂಚಿಸಿದರು.
ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ಸಕಾಲ್, ಆರ್ ಟಿ ಐ , ಐಪಿಜಿಆರ್‍ಎಸ್ (ವಾಟ್ಸಾಪ್ ಗ್ರುಪ್), ಗ್ರಾಮ್ ಒನ್ ಸೇವಾಸಿಂದು ಪೊರ್ಟ್‍ಲ್ ಹಾಗೂ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸ್ವೀಕೃತವಾದ ಅರ್ಜಿಗಳ ವಿಲೇವಾರಿ ಮಾಡುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಾರ್ವಜನಿಕರ ಕುಂದುಕೊರತೆಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಸ್ಪಂದಿಸುವ ಕಾರ್ಯವಾಗಬೇಕು. ಅರ್ಜಿ ಸಲ್ಲಿಸಲು ಆನ್ ಲೈನ್ ವ್ಯವಸ್ಥೆ ಇರುವದರಿಂದ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬರುವುದು ಸಹಜ. ಬಂದಂತಹ ಅರ್ಜಿಗಳನ್ನು ಶಿಸ್ತುಬದ್ದವಾಗಿ ವಿಂಗಡಿಸಿ, ಸಮಂಜಸವಾದ ಹಿಂಬರಹ ಅಥವಾ ಸಮಸ್ಯೆಯನ್ನು ಪರಿಶೀಲಿಸಿ ಪರಿಹಾರ ನೀಡುವ ಮೂಲಕ ಅರ್ಜಿದಾರರ ಸಂಖ್ಯೆಯನ್ನು ಕಡಿತಗೊಳಿಸಬೇಕು ಎಂದರು.
ಅರ್ಜಿ ವಿಲೇವಾರಿಗೆ ತಾಂತ್ರೀಕ ಸಮಸ್ಯೆಗಳಿದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರತಕ್ಕದ್ದು, ಪ್ರತಿಬಾರಿ ಸೊಫ್ಟ್‍ವೇರ್ ಸಮಸ್ಯೆ ಅನ್ನುವಂತಹದ್ದು ಸಮಂಜಸವಾದದ್ದಲ್ಲ. ಸಕಾಲ್ , ಗ್ರಾಮ ಒನ್ ಸೇವಾಸಿಂದು ಪೊರ್ಟ್‍ಲ್ ನಿರ್ವಹಿಸುವಂತಹ ಕನ್ಸಲ್‍ಟ್‍ಂಟ್‍ಗಳು ಎಲ್ಲ ಇಲಾಖೆಗಳ ವೆಬ್ ಸೈಟ್ಸ್ , ತಂತ್ರಾಂಶಗಳ ಕುರಿತ ಸರಿಯಾದ ಮಾಹಿತಿಯನ್ನು ಹೊಂದಿದ್ದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಪರಿಹಾರ ಕಂಡುಕೊಳ್ಳಬಹುದಾಗಿರುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಎ ಸಿ ಶ್ವೇತಾ ಬೀಡಿಕರ, ಜಂಟಿ ಕೃಷಿ ನಿರ್ದೇಶಕಿ ಚೈತ್ರಾ ಪಾಟೀಲ ಸೇರಿದಂತೆ ಇತರರು ಇದ್ದರು.