ಕುಂದಾಪುರದ ವಿವಿಧೆಡೆ ಆಲಿಕಲ್ಲು ಸಹಿತ ಮಳೆ

ಉಡುಪಿ, ಎ.1೨- ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ರವಿವಾರ ಸಂಜೆ ವೇಳೆ ಭಾರೀ ಮಳೆಯಾಗಿದ್ದು, ಕುಂದಾಪುರ ತಾಲೂಕಿನ ವಿವಿಧೆಡೆ ಆಲಿಕಲ್ಲು, ಗಾಳಿ ಮಳೆಯಿಂದ ಅಪಾರ ಹಾನಿ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಸಿದ್ಧಾಪುರ, ಹೊಸಂಗಡಿ, ಯಡಮೊಗೆ, ಹಳ್ಳಿಹೊಳೆ, ಅಜ್ರಿ, ಅಂಪಾರು, ಶಂಕರನಾರಾಯಣ, ಹಾಲಾಡಿ, ಗೋಳಿಯಂಗಡಿ, ಬೆಳ್ವೆ, ಮಡಾಮಕ್ಕಿ, ಹೆಂಗವಳ್ಳಿ, ಅಮಾಸೆಬೈಲು, ಉಳ್ಳೂರು ಪರಿಸರದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿರುವುದಾಗಿ ಮೂಲಗಳು ತಿಳಿಸಿವೆ. ಮಳೆಯಿಂದಾಗಿ ಗೋಳಿಯಂಗಡಿಯಲ್ಲಿ ನಡೆಯುತ್ತಿದ್ದ ವಾರದ ಸಂತೆಗೆ ಅಡ್ಡಿ ಉಂಟಾಗಿದ್ದು, ಸಂತೆಯಲ್ಲಿದ್ದ ಕೆಲವು ಮಾರಾಟದ ಸೊತ್ತುಗಳು ಮಳೆ ಯಿಂದ ಹಾನಿಯಾಗಿವೆ. ಮಡಾಮಕ್ಕಿ ಹಾಗೂ ಶೇಡಿಮನೆ ಪರಿಸರದಲ್ಲಿ ಆಲಿ ಕಲ್ಲು ಮಳೆಯಾಗಿದೆ. ತೆಕ್ಕಟ್ಟೆ, ಮೊಳಹಳ್ಳಿ, ಬಿದ್ಕಲ್‌ಕಟ್ಟೆ, ಹುಣ್ಸೆಮಕ್ಕಿ ಪರಿಸರದಲ್ಲಿ ಉತ್ತಮ ಮಳೆಯಾಗಿದೆ. ಬೆಳ್ವೆಯಲ್ಲಿ ಬೀಸಿದ ಭಾರೀ ಗಾಳಿಯಿಂದಾಗಿ ಅಡಿಕೆ ಮರಳು ಧರೆಗೆ ಉರುಳಿ ಬಿದ್ದಿವೆ. ಅದೇ ರೀತಿ ಕಾರ್ಕಳ ತಾಲೂಕಿನ ಕೆಲವು ಭಾಗಗಳಲ್ಲಿ  ಮಳೆಯಾಗಿದೆ. ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನಲ್ಲಿ ಗುಡುಗು ಸಹಿತ ಹನಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.