ಕುಂದಗೋಳದಲ್ಲಿ 77ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕುಂದಗೋಳ ಆ. 15 : ಪ್ರಪಂಚ ಕಂಡ ನಮ್ಮ ಭಾರತವು ಸ್ವತಂತ್ರವಾಗಲು ಲಕ್ಷಾಂತರ ಬಲಿದಾನ ಗಳಾಗಿದ್ದು, ನಾವೆಲ್ಲ ಕಚ್ಚಾಡದೆ ಒಗ್ಗಟ್ಟಾಗಿರಬೇಕು ಎಂದು ನೂತನ ತಹಶೀಲ್ದಾರ ಅಶ್ವಿನಿ ಚಡಚಣ ಅವರು ಹೇಳಿದರು.
ಅವರು ತಮ್ಮ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಮಹಾತ್ಮ ಗಾಂಧಿ, ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರೀ, ಲಕ್ಷ್ಮೀಬಾಯಿ, ಪ್ರತಾಪ್ ಸಿಂಗ್, ಅಬ್ಬಕ್ಕ, ಚನ್ನಮ್ಮ ಅವರಂತೆ ಅನೇಕ ಮಹನೀಯರು ಬ್ರಿಟಿಷರ ವಿರುದ್ಧ ಹೋರಾಡಿ ಭಾರತವನ್ನು ಸ್ವತಂತ್ರಗೊಳಿಸಿ, ಇಂದು ನಾವು-ನೀವೆಲ್ಲ ಶಾಂತಿಯಿಂದ ಬದುಕುವಂತಾಗಿದೆ. ನಮ್ಮ ನಾಯಕರ ಪ್ರಾಣಬಲಿದಾನವನ್ನು ನಾವೆಂದೂ ಮರೆಯದೆ ಕೂಡಿ ಬಾಳುವಂತಾಗಲಿ ಎಂದು ಕರೆ ನೀಡಿದರು.
ಶಾಸಕ ಎಂ. ಆರ್.ಪಾಟೀಲ ಅವರು ಮಾತನಾಡಿ ನಮ್ಮ ರಾಷ್ಟ್ರ ಸ್ವತಂತ್ರವಾಗಲು ಕನಸು ಕಂಡಿದ್ದ ನಮ್ಮೆಲ್ಲ ಹುತಾತ್ಮರ ಕಷ್ಟ-ನೋವುಗಳನ್ನು ನಾವು ಅರ್ಥೈಸಿಕೊಂಡು ಮುಂದೆ ಸಾಗಬೇಕು. ಅವರ ಪ್ರಾಣತ್ಯಾಗವನ್ನು ಮನನ ಮಾಡಿಕೊಂಡು ಮುಂದುವರೆಯಬೇಕಾಗಿದೆ ಎಂದರು.