‘ಕುಂಜೂರುಪಂಜ’ ಶಾಲಾ ಕಟ್ಟಡಕ್ಕೆ ಪುನಚ್ಛೇತನ

ಪುತ್ತೂರು, ಎ.೨೧- ಕುಂಜೂರುಪಂಜ ಸರ್ಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಮೇಲ್ಚಾವಣಿ ಸೇರಿದಂತೆ ಇತರ ಭಾಗಗಳು ತೀರಾ ನಾದುರಸ್ತಿಯಲ್ಲಿದ್ದು ಕುಸಿಯುವ ಹಂತದಲ್ಲಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ನೀಡಿದ ಶಾಲೆಯ ಕಟ್ಟಡವನ್ನು ದುರಸ್ತಿಗೊಳಿಸುವ ನಿಟ್ಟಿನಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ಊರವರ ಸಮಾಲೋಚನಾ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಕಟ್ಟಡ ನಿರ್ಮಾಣ ಸಮಿತಿ ಸಂಚಾಲಕ ವಿಶ್ವೇಶ್ವರ ಭಟ್ ಬಂಗಾರಡ್ಕ ಅವರು ಶಾಲಾ ಕಟ್ಟಡದ ಮಾನ್ಯತೆ ಸಂಬಂಧ ಇತ್ತೀಚೆಗೆ ವೀಕ್ಷಣೆಗೆ ಬಂದಿದ್ದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಅವರು ಶಾಲಾ ಕಟ್ಟಡವು ತೀರಾ ಶಿಥಿಲಗೊಂಡಿದೆ ಎಂದು ತಿಳಿಸಿದ್ದಾರೆ. ಬಳಿಕ ಆಡಳಿತ ಮಂಡಳಿಯು ಕಟ್ಟಡದ ಚಾವಣಿಯನ್ನು ಪೂರ್ತಿಯಾಗಿ ಹೊಸತಾಗಿ ನಿರ್ಮಿಸಲು ನಿಶ್ಚಯಿಸಿದೆ. ಈ ಕಾಮಗಾರಿ ರೂ. ೭ಲಕ್ಷದಿಂದ ೮ ಲಕ್ಷ ವೆಚ್ಚವಾಗಲಿದೆ. ಈ ಕಾಮಗಾರಿಗೆ ಈಗಾಗಲೇ ಊರವರಿಂದ ರೂ. ೩ ಲಕ್ಷ ಸಂಗ್ರಹಿಸಲಾಗಿದೆ. ಉಳಿಕೆ ಹಣವನ್ನು ದಾನಿಗಳಿಂದ ಸಂಗ್ರಹಿಸಬೇಕಾಗಿದೆ ಎಂದು ಮಾಹಿತಿ ನೀಡಿದರು.
ಹಿರಿಯರಾದ ರಾಮಭಟ್ ಮಾತನಾಡಿ ಹಿರಿಯರು ಕಟ್ಟಿ ಬೆಳೆಸಿದ ನಮ್ಮೂರಿನ ಶಾಲೆಯ ಕಟ್ಟಡ ನಮ್ಮ ಕಣ್ಣೆದುರಿನಲ್ಲಿಯೇ ಕುಸಿದು ಹೋದರೆ ಅದೊಂದು ಊರಿಗೇ ನಾಚಿಗೆಗೇಡಿನ ವಿಚಾರವಾಗಿದೆ. ಶಾಲೆಯ ಪುನಶ್ಚೇತನಕ್ಕಾಗಿ ಎಲ್ಲರೂ ಸಹಕಾರ ನೀಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ನೂತನ ಕಟ್ಟಡ ನಿರ್ಮಾಣ ಸಮಿತಿ ರಚಿಸಲಾಯಿತು. ಸಮಿತಿಯ ಗೌರವ ಅಧ್ಯಕ್ಷರಾಗಿ ರಾಮಭಟ್ ಬಿ, ಚಿನ್ನಡ್ಕ, ಅಧ್ಯಕ್ಷರಾಗಿ ಮಹಾಬಲ ರೈ ಒಳತ್ತಡ್ಕ, ಸಂಚಾಲಕರಾಗಿ ವಿಶ್ವೇಶ್ವರ ಭಟ್ ಬಂಗಾರಡ್ಕ, ಪ್ರಧಾನ ಕಾರ್ಯದರ್ಶಿಗಳಾಗಿ ಪ್ರದೀಪ್ ಕೃಷ್ಣ ಬಂಗಾರಡ್ಕ, ಶ್ರೀಶ ರಾಮಕೃಷ್ಣ ಬಂಗಾರಡ್ಕ, ವಿರೂಪಾಕ್ಷ ಮಚ್ಚಿಮಲೆ, ನವೀನ ಜಿ.ಟಿ ಒಳತ್ತಡ್ಕ ಹಾಗೂ ೨೮ ಸದಸ್ಯರನ್ನು ನೇಮಕ ಮಾಡಲಾಯಿತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪ್ರಭಾಕರ ಪ್ರಭು, ಮುಖ್ಯಗುರು ಉದಯ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಆಡಳಿತ ಮಂಡಳಿ ಕೋಶಾಧಿಕಾರಿ ಗೋಪಾಲ ಭಟ್ ಎನ್ ಸ್ವಾಗತಿಸಿದರು. ಸಂಚಾಲಕ ಪ್ರಭಾರಕ ಕಲ್ಲೂರಾಯ ವಂದಿಸಿದರು