ಕುಂಜಾಡಿ ತರವಾಡು ಮನೆಯಲ್ಲಿ ‘ಧರ್ಮನೇಮ’: ಹಬ್ಬದ ವಾತಾವರಣ

ಪುತ್ತೂರು, ಎ.೯- ಕುಂಜಾಡಿ ತರವಾಡು ಮನೆಯಲ್ಲಿ ೬೦ ವರ್ಷಗಳ ಬಳಿಕ ಮೊದಲ ಬಾರಿ ನಡೆಯುತ್ತಿರುವ ಧರ್ಮ ನೇಮೋತ್ಸವ ವೈಭವ ಗುರುವಾರ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆರಂಭಗೊಂಡಿತು.


ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಕುಂಜಾಡಿ ತರವಾಡು ಕುಟುಂಬದ ಹಿರಿಯರು, ಯಜಮಾನರು, ಬಂಬಿಲ ಗುತ್ತು, ಮೇಗಿನ ಕುಂಜಾಡಿ, ಕೆಳಗಿನ ಕುಂಜಾಡಿ ಮಧ್ಯಸ್ಥರ ನೇತೃತ್ವದಲ್ಲಿ ನಡೆಯುತ್ತಿರುವ ಧರ್ಮ ನೇಮೋತ್ಸವದಲ್ಲಿ ಜನಪ್ರತಿನಿಧಿಗಳು, ರಾಜ್ಯದ ರಾಜಕೀಯ- ಸಾಮಾಜಿಕ ಮುಖಂಡರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಗುರುವಾರ ಮುಂಜಾನೆಯಿಂದಲೇ ಕುಂಜಾಡಿಯಲ್ಲಿ ಹಬ್ಬದ ವಾತಾವರಣ. ಇಡೀ ಪರಿಸರವನ್ನು ಸುಂದರವಾಗಿ ಸಿಂಗರಿಸಲಾಗಿದ್ದು, ನೇಮೋತ್ಸವ ನಡೆಯುವ ವಿಶಾಲ ಚಪ್ಪರ ಪ್ರಾಂಗಣದಲ್ಲಿ ತುಳು ಜನಪದೀಯ ಸೊಗಡಿನ ಅಲಂಕಾರ ಕಣ್ಮನ ಸೆಳೆಯುತ್ತಿತ್ತು. ಧರ್ಮ ನೇಮೋತ್ಸವದ ಕೊಡಿಯಡಿ ಮತ್ತು ಆನೆಚಪ್ಪರವನ್ನು ಸುಂದರವಾಗಿ ಸಿಂಗರಿಸಲಾಗಿದ್ದು ವೈಭವೋಪೇತವಾಗಿ ಕಂಗೊಳಿಸುತ್ತಿತ್ತು.
೩ ಕಡೆಯಿಂದ ಆಗಮಿಸುವ ದೈವಗಳ ಭಂಡಾರದ ಭವ್ಯ ಮೆರವಣಿಗೆ ಮಧ್ಯಾಹ್ನ ೧೧ ಗಂಟೆ ಹೊತ್ತಿಗೆ ಕುಂಜಾಡಿ ಪ್ರವೇಶಿಸಿತು. ಬಂಬಿಲ, ಸರ್ವೆ, ಮೇಗಿನ ಕುಂಜಾಡಿಯಿಂದ ದೈವಗಳ ಭಂಡಾರವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ತರಲಾಯಿತು. ವಾದ್ಯಮೇಳಗಳೊಂದಿಗೆ, ಪತಾಕೆ, ನಿಶಾನೆಗಳು, ಛತ್ರ ಚಾಮರಗಳು ಗ್ರಾಮದೈವಕ್ಕೆ ರಾಜ ಮರ್ಯಾದೆಯ ಸ್ವಾಗತ ನೀಡಿತು. ಕೇರಳ ಚೆಂಡೆಯ ಅಬ್ಬರ, ತಾಸೆ- ವಾದ್ಯಗಳ ವೈಭವದ ಜತೆಯಲ್ಲೇ ಪೂರ್ಣಕುಂಭ ಹೊತ್ತ ಸುಮಂಗಲಿಯರು ದ್ವಾರದ ಬಳಿಯಿಂದ ಸ್ವಾಗತ ಕೋರಿದರು.
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಎಸ್‌ಪಿ ಸೋನವಣೆ ಋಷಿಕೇಷ್ ಭಗವಾನ್, ಡಿವೈಎಸ್‌ಪಿ ಗಾನಾ ಪಿ. ಕುಮಾರ್ ಉಪಸ್ಥಿತರಿದ್ದರು. ಸಂಸದರಾದ ಅಣ್ಣಾ ಸಾಹೇಬ್ ಜೊಲ್ಲೆ, ಗದ್ದಿಗೌಡರ್, ಭಗವಂತ ಖೂಬಾ, ಡಿ.ಕೆ. ಸುರೇಶ್ ಮತ್ತಿತರರು ಭಾಗವಹಿಸಿದರು.
ಧರ್ಮನೇಮೋತ್ಸವ ಪರಿಸರವನ್ನು ಸಂಪೂರ್ಣವಾಗಿ ಕೋವಿಡ್ ಸುರಕ್ಷಿತಾ ವಲಯವನ್ನಾಗಿ ಮಾರ್ಪಡಿಸಲಾಗಿದೆ. ಆರೋಗ್ಯ ಇಲಾಖೆಯ ವತಿಯಿಂದ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ಕೋವಿಡ್ ಪರೀಕ್ಷೆ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಅಗತ್ಯ ಇರುವವರನ್ನು ಕೋವಿಡ್ ಲಸಿಕೆಗಾಗಿ ಕರೆದೊಯ್ಯುವ ವ್ಯವಸ್ಥೆಯನ್ನೂ ಮಾಡಲಾಗಿದೆ. ನೇಮೋತ್ಸವ ವಠಾರ ಪ್ರವೇಶಿಸುವ ಎರಡು ಪ್ರಧಾನ ದ್ವಾರಗಳಲ್ಲಿ ಸ್ಯಾನಿಟೈಸೇಶನ್ ಟನೆಲ್ ಸ್ಥಾಪಿಸಲಾಗಿದೆ. ಇದರ ಮೂಲಕ ಒಳ ಬರುವ ಜನವರಿಗೆ ಸ್ಯಾನಿಟೈಸೇಶನ್ ಸಿಂಪಡಣೆಯಾಗುತ್ತದೆ. ಇದಲ್ಲದೆ ಥರ್ಮಲ್ ಸ್ಕ್ಯಾನರ್ ಮೂಲಕ ದೇಹನ ತಾಪಮಾನ ಪರಿಶೀಲನೆ ಮಾಡಲಾಗುತ್ತಿದೆ. ಮಾಸ್ಕ್ ಧಾರಣೆ ಕಡ್ಡಾಯ ಮಾಡಲಾಗಿದ್ದು, ಅಗತ್ಯವುಳ್ಳವರಿಗೆ ಉಚಿತ ಮಾಸ್ಕ್ ವಿತರಣೆ ನಡೆಯುತ್ತಿದೆ.