ಕುಂಚಿಟಿಗರ ಸಂಘಟನೆಗೆ ಶ್ರೀಗಳ ಕರೆ

ಮಧುಗಿರಿ, ಜು. ೧೩- ಕುಂಚಿಟಿಗರು ಸಂಘಟಿತರಾಗಬೇಕು ಎಂದು ಎಲೆರಾಂಪುರದ ಕುಂಚಿಟಿಗ ಮಠದ ಪೀಠಾಧ್ಯಕ್ಷ ಶ್ರೀ ಹನುಮಂತನಾಥ ಸ್ವಾಮೀಜಿ ಸಲಹೆ ನೀಡಿದರು.
ತಾಲ್ಲೂಕಿನ ನೀಲಿಹಳ್ಳಿ ಗ್ರಾಮದಲ್ಲಿ ಕುಂಚಿಟಿಗರ ಉಂಡೆ ನೋರ ಕುಲದ. ಓಬಳ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಏಕಾದಶಿ ಅಂಗವಾಗಿ ಏರ್ಪಡಿಸಿದ್ದ ಅರತಿ ಮತ್ತು ಉತ್ಸವ ಸೇವೆ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸನಾತನ ಧರ್ಮ ಹಿಂದೂ ಸಂಸ್ಕೃತಿಗಳಲ್ಲಿ ತನ್ನದೇ ಆದ ಮಹತ್ವ ಹೊಂದಿದೆ. ಕುಂಚಿಟಿಗರ ೪೮ ಕುಲಗಳ ಆಚರಣೆ ಮತ್ತು ಪದ್ಧತಿಗಳು ಅಳಿಸಿ ಹೋಗಬಾರದು ಯಾವುದೇ ಕಾರಣಕ್ಕೂ ಆಚಾರ-ವಿಚಾರಗಳನ್ನು ಬಿಟ್ಟುಕೊಡಬಾರದು ಎಂದರು.
ಹಬ್ಬ ಮತ್ತು ಆಚರಣೆಗಳು ಮನುಷ್ಯನ ಅಹಂಕಾರವನ್ನು ಕೊಲ್ಲುತ್ತದೆ ಮತ್ತು ಧಾರ್ಮಿಕ ಅಚರಣೆಗಳತ್ತ ಕೊಂಡೊಯ್ಯುತ್ತದೆ. ಕುಂಚಿಟಿಗ ಜಾತಿ ಸ್ವತಂತ್ರ ಜಾತಿಯೆಂದು ಮೈಸೂರಿನ ಮಹಾರಾಜರ ಆಳ್ವಿಕೆಯಲ್ಲಿ ಹೇಳಿದ್ದನ್ನು ನೆನಪಿಸಿಕೊಳ್ಳಬೇಕು ಎಂದ ಅವರು, ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಯಲ್ಲಿ ಕುಂಚಿಟಿಗ ಜಾತಿಯನ್ನು ಸೇರಿಸಬೇಕೆಂದು ಒತ್ತಾಯಿಸಿ ಈ ಬಗ್ಗೆ ಯಾವುದೇ ಹೋರಾಟಕ್ಕೂ ಕುಂಚಿಟಿಗ ಮಠ ಸಿದ್ಧವಿದೆ ಎಂದರು.
ಮುಂದಿನ ದಿನಗಳಲ್ಲಿ ಓಬಳ ರಂಗನಾಥಸ್ವಾಮಿ ದೇವಸ್ಥಾನ ಯಾತ್ರಾಸ್ಥಳವಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಯರಗುಂಟೆ ಚಂದ್ರಶೇಖರ್, ರಾಜಣ್ಣ, ಮೋಹನ್‌ಕುಮಾರ್, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.