ಕುಂಚಿಟಿಗರಿಗೆ ಒಬಿಸಿ ಪಟ್ಟಿಯಲ್ಲಿ ಸ್ಥಾನ ಕೊಡಿಸುವುದೇ ನನ್ನ ಧ್ಯೇಯ:ಸ್ವಾಮೀಜಿ

ಮಧುಗಿರಿ, ಜು. ೨೮- ಸಮಾಜದ ಅಭಿವೃದ್ಧಿಗೆ ಮಠ ಕಟ್ಟಿದ್ದು, ನನ್ನ ಉಸಿರು ಹೋಗುವ ಮುನ್ನ ಕುಂಚಿಟಿಗ ಸಮುದಾಯಕ್ಕೆ ಓಬಿಸಿ ಪಟ್ಟಿಯಲ್ಲಿ ಸ್ಥಾನ ಕೊಡಿಸಿಯೇ ಪ್ರಾಣ ಬಿಡುವುದಾಗಿ ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಹನುಮಂತನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಸಿಪಿಸಿ ಸಭಾಂಗಣದಲ್ಲಿ ಕುಂಚಿಟಿಗ ಒಕ್ಕಲಿಗ ಸಂಘ ಹಾಗೂ ಕುಂಚಿಟಿಗ ಒಕ್ಕಲಿಗ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಹಾಗೂ ಡಿ.ಬನುಮಯ್ಯನವರ ಜಯಂತಿ ಹಾಗೂ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಸಾಯುವ ಮುನ್ನ ಕುಂಚಿಟಿಗರಿಗೆ ಓಬಿಸಿ ಸ್ಥಾನ ಕಲ್ಪಿಸಿ ೪೮ ಕುಲ ದೇವರ ದೇಗುಲವನ್ನು ಒಂದು ಕಡೆ ನಿರ್ಮಿಸಿ ಎಲೆರಾಂಪುರವನ್ನು ಕುಂಚಿಟಿಗರ ಕಾಶಿಯನ್ನಾಗಿ ಮಾಡುತ್ತೇನೆ. ಸಮಾಜಕ್ಕೆ ತನ್ನದೆ ಆದ ಪರಂಪರೆಯಿದ್ದು, ಕುಂಚಿಟಿಗರ ಸಂಘ ಉಳಿಯಲು ಎಲ್ಲರೂ ಬದ್ಧತೆ ಪ್ರದರ್ಶಿಸಬೇಕು. ನಾವು ದೇಶದಲ್ಲಿ ೪ ರಾಜ್ಯಗಳಲ್ಲಿ ಬಹುಸಂಖ್ಯಾತರಾಗಿದ್ದು, ಪ್ರತಿಯೊಬ್ಬ ರಾಜಕಾರಣಿ ಕುಂಚಿಟಿಗ ಸಮುದಾಯವನ್ನು ಗೌರವಿಸುವ ಕೆಲಸ ಮಾಡಬೇಕು. ಕುಂಚಿಟಿಗರ ಅಭ್ಯರ್ಥಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಮೊದಲ ಪ್ರಾಶಸ್ತ್ಯದ ಮತ ನೀಡಬೇಕು. ಕನಿಷ್ಠ ಹತ್ತು ಜನ ಕುಂಚಿಟಿಗರು ವಿಧಾನಸಭೆಗೆ ಆಯ್ಕೆ ಆದಾಗ ಮಾತ್ರ ಮೀಸಲಾತಿ ಸೌಲಭ್ಯ ಮತ್ತು ರಾಜಕೀಯ, ಸಾಮಾಜಿಕ ಬದಲಾವಣೆಗಳು ಹೊಂದಲು ಸಾಧ್ಯ. ಮುಂದಿನ ದಿನಗಳಲ್ಲಿ ಕುಂಚಿಟಿಗ ಒಕ್ಕಲಿಗರ ಸಂಘದಲ್ಲಿ ಎಲ್.ಕೆ.ಜಿ ಯಿಂದ ಪಿಯುಸಿವರೆಗೆ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವಂತೆ ತಿಳಿಸಿದರು.
ಸಮಾಜದ ಮಕ್ಕಳ ಶಿಕ್ಷಣಕ್ಕೆ ಸಂಘವು ಎಲ್ಲ ಸೌಲಭ್ಯ ಕಲ್ಪಿಸಿದ್ದು, ಗುರಿ ಸಾಧನೆಗೆ ಕಾರಣರಾದ ಸಮಾಜದ ಹಾಗೂ ಹೆತ್ತವರ ಋಣವನ್ನು ತೀರಿಸಬೇಕು. ಶಿಕ್ಷಣವೆಂದರೆ ಅಂಕಗಳಿಸುವುದಷ್ಟೇ ಅಲ್ಲ. ಹೆತ್ತವರನ್ನು ವೃದ್ದಾಶ್ರಮಕ್ಕೆ ಬಿಡದೆ ಅನ್ನ ಹಾಕುವುದೇ ಬದುಕಿನ ಶಿಕ್ಷಣ. ಸಮಾಜದ ಅಭಿವೃದ್ಧಿಗೆ ರಾಜಕೀಯ ಶಕ್ತಿ ಅಗತ್ಯವಾಗಿದ್ದು, ಒಗ್ಗಟ್ಟಿನಿಂದ ಆ ಶಕ್ತಿಯನ್ನು ಪಡೆಯಬೇಕು ಎಂದರು.
ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಸಮಾಜದ ಪ್ರತಿ ಸಮಸ್ಯೆಗೂ ಶಿಕ್ಷಣವೇ ಪರಿಹಾರ. ಸಮಾಜ ನಂಬಿದ ಬೇಸಾಯ ಇಂದು ಲಾಭದಾಯಕವಾಗಿಲ್ಲ. ಆದರೆ ಶಿಕ್ಷಣ ನೀಡಿದರೆ ನಮ್ಮ ಮಕ್ಕಳು ದೇಶದ ಆಸ್ತಿಯಾಗುತ್ತಾರೆ. ಶಿಕ್ಷಣಕ್ಕೆ ಸಂಘದ ಜತೆ ಸರ್ಕಾರವಿದ್ದು, ಎಲ್ಲ ಸೌಲಭ್ಯದ ಸದುಪಯೋಗವಾಗಲಿ. ಸಮಾಜದ ಜತೆ ಸದಾ ಇರುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಕಲ್ಪಶ್ರೀ, ಗೌರವ ಡಾಕ್ಟರೇಟ್ ಪಡೆದ ನರಸೇಗೌಡ, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಚಿದಾನಂದಗೌಡ, ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್, ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ, ಚಿತ್ರದುರ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಿ. ಸಿ ಹನುಮಂತೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್‌ಬಾಬು, ಪುರಸಭಾ ಸದಸ್ಯರುಗಳಾದ ಎಂ ಎಲ್ ಗಂಗರಾಜು, ಚಂದ್ರಶೇಖರ್‌ಬಾಬು, ಲಾಲಾ ಪೇಟೆ ಮಂಜುನಾಥ್, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಚೆನ್ನ ಲಿಂಗಪ್ಪ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ ಹೆಚ್ .ವೆಂಕಟೇಶಯ್ಯ, ತಾಲ್ಲೂಕು ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.