ಕೀಯಾ ಬೇಡ ರಾಜಕೀಯ ಬೇಕು

ಎನ್.ವೀರಭದ್ರಗೌಡ
ಬಳ್ಳಾರಿ, ಜ.6: ಕೀಯಾ ಕಾರ್ ಷೋ ರೂಂ ನೋಡಿಕೋ ಎಂದರು. ಆದರೆ ನನಗೆ ಕೀಯಾ ಬೇಡ ರಾಜಕೀಯಬೇಕೆಂದೆ. ಹೀಗೆಂದವರು ಗಾಲಿ ಶ್ರವಣ ಕುಮಾರ್ ರೆಡ್ಡಿ.
ನಗರ ಶಾಸಕ, ಕೆ.ಎಂ.ಎಫ್ ನ ಮಾಜಿ ಅಧ್ಯಕ್ಷ, ನಗರದ ಮಾಜಿ ಮೇಯರ್, ಮೊದಲಾದ ಹುದ್ದೆಗಳ ರಾಜಕೀಯ ಅನುಭವದ ಗಾಲಿ ಸೋಮಶೇಖರರೆಡ್ಡಿ ಅವರ ದ್ವಿತೀಯ ಪುತ್ರ ಈ.ಗಾಲಿ ಶ್ರವಣ ಕುಮಾರ್ ರೆಡ್ಡಿ. ಜರ್ಮನಿಯಲ್ಲಿ ಎಂ.ಬಿ.ಎ ಪದವಿ ಮುಗಿಸಿರುವ ಇವರಿಗೆ ರಾಜಕೀಯದ ಮೂಲಕ ಜನಸೇವೆ ಮಾಡಬೇಕೆಂಬ ಹಂಬಲವಂತೆ. ಆದರೆ ಅವರ ತಂದೆ ಗಾಲಿ ಸೋಮಶೇಖರರೆಡ್ಡಿ ಅವರು ಎಂ.ಬಿ.ಎ ಮುಗಿಸಿರುವ ನೀನು ಉದ್ಯಮಿಯಾಗೆಂದು ಕೀಯಾ ಕಾರ್ ಷೋ ರೂಂನ್ನು ಬಳ್ಳಾರಿಯಲ್ಲಿ ತೆರೆದು ನೋಡಿಕೊಳ್ಳಿ ಎಂದರಂತೆ. ಆದರೆ ಆತ ಉದ್ಯಮಿಯಾಗಿ ಹಣಗಳಿಸುವುದು ಒಂದು ಕಡೆ ಇರಲಿ. ಆದರೆ ನನಗೆ ನಿಮ್ಮಂತೆ ಜನ ಸೇವೆ ಮಾಡಬೇಕೆಂಬ ಹಂಬಲ ಇದೆ. ಅದಕ್ಕಾಗಿ ‘ಕೀಯಾ ಬೇಡ ನನಗೆ ರಾಜಕೀಯ ಬೇಕೆಂದು ತಂದೆ ಜೊತೆ ಈಗ ವಾರ್ಡ್ ಗಳ ಭೇಟಿ ಆರಂಭ ಮಾಡಿದ್ದಾರೆ.
ತಂದೆ ಎಂ.ಎಲ್.ಎ, ಮಗನೂ ರಾಜಕೀಯ ಹೊಂಟಾರಾ ಎಂದು ವಂಶ ಪಾರಂಪರೆಯ ರಾಜಕೀಯನಾ ಎಂಬ ಪ್ರಶ್ನೆಗೆ ಈಗ ಅರ್ಥವಿಲ್ಲದಂತಾಗಿದೆ. ಪ್ರತಿ ಹಳ್ಳಿಯಿಂದ ದೆಹಲಿವರೆಗೂ ಈಗ ಎಲ್ಲೆಡೆ ವಂಶ ಪಾರಂಪರೆಯ ರಾಜಕೀಯ ನಡೆಯುತ್ತಿದೆ.
ಗಾಲಿ ಕುಟುಂಬದಲ್ಲಿ ಮೊದಲಿಗೆ ಹಾಲಿ ಹರಪನಹಳ್ಳಿ ಶಾಸಕ ಜಿ.ಕರುಣಾಕರ ರೆಡ್ಡಿ ಅವರು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗುವ ಮೂಲಕ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡರು. ನಂತರದ ಬೆಳವಣಿಗೆಯಲ್ಲಿ ಜನಾರ್ಧನರೆಡ್ಡಿ ಮತ್ತು ಕರುಣಾಕರರೆಡ್ಡಿ ಸಹೋದರರು ಸಚಿವರಾಗಿ ಸೋಮಶೇಖರರೆಡ್ಡಿ ಅವರು ಶಾಸಕರಾದರು. ಕರುಣಾಕರರೆಡ್ಡಿ ಅವರಿಗೆ ಇಬ್ಬರು, ಜನಾರ್ಧನರೆಡ್ಡಿಗೆ ಓರ್ವ, ಸೋಮಶೇಖರರೆಡ್ಡಿ ಅವರಿಗೆ ಇಬ್ಬರು ಪುತ್ರರಿದ್ದು ಅವರ ಪೈಕಿ ಸದ್ಯ ಈ ಗಾಲಿ ಶ್ರವಣಕುಮಾರ್ ರೆಡ್ಡಿ ತಮ್ಮ ತಂದೆ, ದೊಡ್ಡಪ್ಪ, ಚಿಕ್ಕಪ್ಪನಂತೆ ರಾಜಕೀಯಕ್ಕೆ ಬರಲು ಇಚ್ಛಾಶಕ್ತಿ ಹೊಂದಿದ್ದಾರೆಂತೆ.
ಕೆಲ ತಿಂಗಳಿಂದ ಮನೆಯಲ್ಲೆ ತಂದೆಯೊಂದಿಗೆ ರಾಜಕೀಯ ವಿದ್ಯಾಮಾನಗಳನ್ನು ಗಮನಿಸುತ್ತಿದ್ದ ಶ್ರವಣಕುಮಾರ್ ನಿನ್ನೆಯಿಂದ ತಂದೆಯೊಂದಿಗೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು, ವಾರ್ಡ್ ವೀಕ್ಷಣೆಯಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ.
ಇಂದು ನಗರದ ಆಕಲು ಚಲುಮಯ್ಯ ಬೀದಿಯಲ್ಲಿ ತಂದೆಯೊಂದಿಗೆ ಸಂಚರಿಸಿ ಜನರ ನೋವು ನಲಿವುಗಳನ್ನು ಆಲಿಸಿದರು.
ತಂದೆಯಂತೆ ತಮ್ಮ ರಾಜಕೀಯ ಜೀವನವನ್ನು ನಗರಪಾಲಿಕೆಯ ಕಾರ್ಪೊರೇಟರ್ ಆಗುವ ಮೂಲಕ ಆರಂಭಿಸಲು ಇಚ್ಛಿಸಿದ್ದೀರಾ ಎಂಬ ಪ್ರಶ್ನೆಗೆ ಆ ಬಗ್ಗೆ ಸದ್ಯ ಇನ್ನು ಏನು ನಿರ್ಧಾರ ತೆಗೆದುಕೊಂಡಿಲ್ಲ. ಸೇವೆ ಮಾಡಬೇಕೆಂಬ ಬಯಕೆ ಇದೆ. ಜನ ಸಂಪರ್ಕ ಪಡೆಯಲು ತಂದೆಯೊಂದಿಗೆ ಹೊರಟಿರುವೆ ಎನ್ನುತ್ತಾರೆ ಶ್ರವಣಕುಮಾರ್.
ಉದ್ಯಮಿಯಾದರೆ ಒಂದಿಷ್ಟು ಜನರಿಗೆ ಉದ್ಯೋಗ ನೀಡಬಹುದು ಆದರೆ ಜನ ಸೇವಕರಾದರೆ ಸಾವಿರಾರು ಜನರ ಸಂಕಷ್ಟಗಳಿಗೆ ಸ್ಪಂದಿಸಬಹುದೆಂಬುದು ಅವರ ಬಯಕೆಯಂತೆ
ಕೋಟ್:
ಮಗನನ್ನು ರಾಜಕೀಯಕ್ಕೆ ಬರಬೇಕೆಂಬುದು ನನ್ನ ಆಶಯ ಅಲ್ಲ. ನಾನು ಕೀಯಾ ಷೋ ರೂಂ ನೋಡಿಕೋ ಎಂದೆ ಆತ ‘ಕೀಯ ಬೇಡ’ ರಾಜಕೀಯ ಬೇಕೆಂದು ಜೊತೆಗೆ ಬರುತ್ತಿದ್ದಾನೆ. ಸದ್ಯ ಬರಲಿರುವ ಪಾಲಿಕೆ ಚುನಾವಣೆಗೇನೂ ಸ್ಪರ್ಧಿಸಲ್ಲ ಅನುಭವ ಪಡೆದುಕೊಳ್ಳಲಿ.
ಗಾಲಿ ಸೋಮಶೇಖರರೆಡ್ಡಿ, ನಗರ ಶಾಸಕರು, ಬಳ್ಳಾರಿ.