ಕೀಟ ರೋಗದ ನಿಯಂತ್ರಣಕ್ಕೆ ರೈತರ ತೋಟಗಳಿಗೆ ಭೇಟಿ ನೀಡಿ ಸಲಹೆ

(ಸಂಜೆವಾಣಿ ವಾರ್ತೆ)
ಬಳ್ಳಾರಿ,ನ.11 ತಾಲೂಕಿನ ಸಂಗನಕಲ್ಲು ಗ್ರಾಮದ ಗಂಗಾಧರ್, ಬೇವಿನಹಳ್ಳಿ ಪೊಂಪಣ್ಣ, ಶಂಕ್ರಪ್ಪ, ವೀರನಗೌಡ, ರೈತ ಮುಖಂಡ ಸಂಗನಕಲ್ಲು ಕೃಷ್ಣ ಉಪ್ಪಾರ್ ಹಾಗೂ ಇತರೆ ರೈತರ ತೋಟಗಳಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಯೋಗೇಶ್ವರ್ ಹೆಚ್.ಕೆ ಅವರು ಮೊನ್ನೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ಮೆಣಸಿನಕಾಯಿ ಬೆಳೆಯಲ್ಲಿ ತೀವ್ರತರವಾದ ಕೀಟ ಮತ್ತು ರೋಗಬಾಧೆ ಕಾಣುತ್ತಿದೆ. ಹಾಗಾಗಿ ರೈತ ಬಾಂಧವರು ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತವಾಗಿರುತ್ತದೆ ಎಂದು ಹೇಳಿ ಕೀಟ ಮತ್ತು ರೋಗದ ನಿಯಂತ್ರಣಕ್ಕಾಗಿ ಸೂಕ್ತ ಸಲಹೆ ಸೂಚನೆಗಳನ್ನ ನೀಡಿದ್ದಾರೆ.
ರೋಗ ನಿಯಂತ್ರಣಕ್ಕಾಗಿ ರೋಗ ಪೀಡಿತ ಹಣ್ಣುಗಳನ್ನು ಕಿತ್ತು ದೂರವಿಡಬೇಕು. ಭೂಮಿಯಲ್ಲಿ ಹೆಚ್ಚು ತೇವಾಂಶ ಇರಕೂಡದು. ಮಚ್ಚೆ ರೋಗದ ನಿಯಂತ್ರಣಕ್ಕಾಗಿ ಪ್ರೊಪಿನೆಬ್ 2.5 ಗ್ರಾಂ ಅಥವಾ ಥೈಯೋಫಿನೇಟ್ ಮಿಥೈಲ್ 0.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು ಎಂದು ಹೇಳಿದರು.
ಬೂದುರೋಗ ನಿಯಂತ್ರಣಕ್ಕಾಗಿ ಟೆಬ್ಯುಕೋನಜೋಲ್ 01 ಮಿ.ಲೀ. ಅಥವಾ ಹೆಕ್ಸಾಕೋನಜೋಲ್ 01 ಮಿ.ಲೀ.  ಅಥವಾ ಡೈಫಿನಕೋನಜೋಲ್ 0.5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.  ಕೀಟ ಮತ್ತು ರೋಗದ ಬಾದೆಯು ಗಿಡಗಳ ಸಾಂದ್ರತೆ ಹೆಚ್ಚಾಗಿರುವುದರಿಂದ ಹಾಗೂ ಪ್ರತಿ ವರ್ಷವೂ ಅದೇ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯುವುದರಿಂದ ಹೆಚ್ಚಾಗಿರುವುದು ಕಂಡುಬಂದಿದ್ದು, ಪ್ರತಿ ಎಕರೆಗೆ 8000 ರಿಂದ 9000 ಗಿಡಗಳನ್ನು ನಾಟಿ ಮಾಡುವುದು ಮತ್ತು ಬೆಳೆ ಪರಿವರ್ತನೆ ಪದ್ಧತಿಯನ್ನು ಅನುಸರಿಸುವುದು ಸೂಕ್ತವಾಗಿರುತ್ತದೆ ಎಂದು ರೈತರಿಗೆ ಸಲಹೆ ನೀಡಿದರು.
ತೋಟಗಾರಿಕೆ ಉಪನಿರ್ದೇಶಕ ಶರಣಪ್ಪ ಬೋಗಿ, ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜುನಾಯ್ಕ, ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಪ್ರಸಾದ್, ರೈತ ಮುಖಂಡರು ಹಾಗೂ ಗ್ರಾಮದ ರೈತರು ಉಪಸ್ಥಿತರಿದ್ದರು.