ಕಿವೀಸ್ ವಿರುದ್ದದ ಮೊದಲ ಟೆಸ್ಟ್, ಸುಸ್ಥಿತಿಯಲ್ಲಿ ಭಾರತ 4 ವಿಕೆಟ್ ಗೆ 258

ಕಾನ್ಪುರ, ನ.25- ಮಧ್ಯಮ‌ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಅರ್ಧ ಶತಕದ ನೆರವಿನಿಂದ ನ್ಯೂಜಿಲೆಂಡ್ ವಿರುದ್ದ ಮೊದಲ ಟೆಸ್ಟ್ ನಲ್ಲಿ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿ ಸುಸ್ಥಿತಿಯಲ್ಲಿದೆ.
ಟಾಸ್ ಗೆದ್ದ ನಾಯಕ ಅಜಿಂಕ್ಯಾ ರಹಾನೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.‌ ಶುಭ್ ಮನ್ ಗಿಲ್ ಹಾಗೂ ಮಯಾಂಕ್ ಅಗರ್ ವಾಲ್ ಇನ್ನಿಂಗ್ಸ್ ಆರಂಭಿಸಿದರು. ಆದರೆ ಉತ್ತಮ ಆರಂಭ ಒದಗಿಸಲು ಇಬ್ಬರು ಬ್ಯಾಟರ್ ಗಳು ವಿಫಲರಾದರು. ಅಗರ್ ವಾಲ್ 13 ರನ್ ಗಳಿಸಿ ನಿರ್ಗಮಿಸಿ ನಿರಾಸೆ ಮೂಡಿಸಿದರು.
ನಂತರ ಗಿಲ್ ಹಾಗೂ ಚೇತೇಶ್ವರ ಪೂಜಾರ ತಂಡಕ್ಕೆ ಚೇತರಿಕೆ ನೀಡಿದರು.‌ಅರ್ಧಶತಕ ಬಾರಿಸಿ ಆಡುತ್ತಿದ್ದ ಗಿಲ್ 52 ರನ್ ಗಳಿಸಿದ್ದಾಗ ಜಾಮಿಸನ್ ಬೌಲಿಂಗ್ ನಲ್ಲಿ ನಿರ್ಗಮಿಸಿದರು. ಚೇತೇಶ್ವರ ಪೂಜಾರ 26 ರನ್ ಗಳಿಸಿ ಔಟಾದರು.
ನಾಯಕ ರಹಾನೆ ಮತ್ತು ಶ್ರೇಯಸ್ ಅಯ್ಯರ್ ಇನ್ನಿಂಗ್ಸ್ ಕಟ್ಟಲು ಮುಂದಾದರು. ಚೆನ್ನಾಗಿ ಆಡುತ್ತಿದ್ದ ರಹಾನೆ 35 ರನ್ ಗಳಿಸಿದ್ದಾಗ‌ ಜಾಮಿಸನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.
ನಂತರ ಜಡೇಜಾ‌ ಹಾಗೂ ಅಯ್ಯರ್ ತಂಡವನ್ನು ಮುನ್ನಡೆಸಿದರು.‌ ಮೊದಲ ದಿನದಾಟದ ಅಂತ್ಯಕ್ಕೆ ಅಯ್ಯರ್ 75 ಹಾಗೂ ಜಡೇಜಾ 50 ರನ್ ಗಳಿಸಿ ಆಡುತ್ತಿದ್ದಾರೆ.
ನ್ಯೂಜಿಲೆಂಡ್ ಪರ ಕೈಲ್ ಜಾಮಿಸನ್ ಮೂರು ಹಾಗೂ ಟಿಮ್ ಸೌದಿ ಒಂದು ವಿಕೆಟ್ ಗಳಿಸಿದರು.