
ಕಲಬುರಗಿ:ಮಾ.2: ವಿವಿಧ ಕಾರಣಗಳಿಂದಾಗಿ ಕಿವಿಗಳಿಗೆ ತೊಂದರೆಯಾಗುತ್ತದೆ. ಅದನ್ನು ಆರಂಭಿಕ ಹಂತದಲ್ಲಿಯೇ ಗುರ್ತಿಸಿ ಸೂಕ್ತ ಚಿಕಿತ್ಸೆ ಹಾಗೂ ಸಲಹೆ ನೀಡಿದರೆ ಕಿವಿಗಳು ಆರೋಗ್ಯವಾಗುತ್ತವೆ. ಕಿವಿಗಳ ಆರೋಗ್ಯದಿಂದ ಉತ್ತಮ ಆಲಿಸುವಿಕೆ ಸಾಧ್ಯವಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮ ಎಸ್.ಕೇಶ್ವಾರ ಹೇಳಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ‘ನಗರ ಪ್ರಾಥಮಿಕ ಆರೋಗ್ಯ ಕೇಂದ’್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಜರುಗಿದ ‘ವಿಶ್ವ ಶ್ರವಣ ದಿನಾಚರಣೆ’ಯಲ್ಲಿ ಮಕ್ಕಳ ಕಿವಿಗಳನ್ನು ತಪಾಸಣಾ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಕ್ತ ಸಂಬಂಧಿ ವಿವಾಹ ಹಾಗೂ ಅನುವಂಶಿಯತೆಯು ಪ್ರಮುಖವಾಗಿ ಕಿವುಡತನಕ್ಕೆ ಕಾರಣವಾಗಿದೆ. ಶ್ರವಣದೋಷವುಳ್ಳ ವ್ಯಕ್ತಿಗೆ ಸೂಕ್ತ ಹಾಗೂ ಸಮಯೋಚಿತ ಸೇವೆಗಳನ್ನು ನೀಡಬೇಕು. ಕಿವಿಗಳ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಬೇಡ. ಕಿವಿಯಲ್ಲಿ ನೀರು, ಕಸ ಸೇರದಂತೆ ನೋಡಿಕೊಳ್ಳಬೇಕು. ಚೂಪಾದ ವಸ್ತುಗಳು ಕಿವಿಯಲ್ಲಿ ಹಾಕಿಕೊಳ್ಳಬಾರದು. ವೈದ್ಯರು ಸೂಚಿಸಿದ ಶ್ರವಣಯಂತ್ರಗಳನ್ನು ಮಾತ್ರ ಬಳಸಬೇಕು. ಕಿವಿಗಳ ಬಗ್ಗೆ ನಿಷ್ಕಾಳಜಿ ವಹಿಸಿ ಕಿವುಡತನ ಉಂಟಾದರೆ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆಯೆಂದರು.
ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಶಬ್ದ ಮಾಲಿನ್ಯದಿಂದ ಕಿವಿಗಳಿಗೆ ತೊಂದರೆಯಾಗುತ್ತಿದೆ. 65 ಡೆಸಿಬಲ್ ಶಬ್ದ ಆಲಿಸಲು ಸಾಧ್ಯ. ಕೈಗಾರಿಕೆ, ವಾಹನಗಳು, ಧ್ವನಿವರ್ಧಕಗಳಿಂದ ಶಬ್ದ ಹೆಚ್ಚಾಗುತ್ತಿದೆ. 135 ಡೆಸಿಬಲ್ ಶಬ್ದದಿಂದ ಕಿವಿಯ ನೋವು ಹಾಗೂ ಶಾಶ್ವತ ಕಿವುಡತನ ಉಂಟಾಗುತ್ತದೆ. ಜೊತೆಗೆ ಮಾನಸಿಕ ಅಶಾಂತಿ, ಹೃದಯ ಬಡಿತ ಹೆಚ್ಚಳವಾಗಿ ಸಮಸ್ಯೆಗಳು ಉಂಟಾಗುತ್ತವೆ. ಶಬ್ದ ಮಾಲಿನ್ಯ ನಿಯಂತ್ರಣ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಪುಷ್ಪಾ ಆರ್.ರತ್ನಹೊನ್ನದ್, ಜಗನಾಥ, ಗುರುರಾಜ, ಸಂಗಮ್ಮ, ಲಕ್ಷ್ಮೀ, ಮಂಗಲಾ, ಗಂಗಾಜ್ಯೋತಿ, ಚಂದಮ್ಮ, ನಾಗಮ್ಮ, ಸುಲೋಚನಾ, ಸಂಗೀತಾ, ಗೌರಮ್ಮ, ನಾಗೇಶ್ವರಿ ಸಿಬ್ಬಂದಿ ವರ್ಗ ಹಾಗೂ ಬಡಾವಣೆಯ ಮಕ್ಕಳು, ಮಹಿಳೆಯರು, ನಾಗರಿಕರು ಇದ್ದರು.