ಕಿಲಗೆರೆ ಗ್ರಾಮದ ಕಬ್ಬಿನ ಗದ್ದೆಯೊಂದರಲ್ಲಿ ಹುಲಿ ಪ್ರತ್ಯಕ್ಷ: ಗ್ರಾಮಸ್ಥರ ಅಂತಕ

ಚಾಮರಾಜನಗರ: ಮಾ.02:- ತಾಲೂಕಿನ ಕಿಲಗೆರೆ ಗ್ರಾಮದ ಕಬ್ಬಿನ ಗದ್ದೆಯೊಂದರಲ್ಲಿ ಹುಲಿ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರ ನಿದ್ದೆಗೆಡಿಸಿದೆ.
ಗ್ರಾಮದ ಮಹದೇವಸ್ವಾಮಿ ಎಂಬುವರ ಜಮೀನಿನ ಹಸಿ ಮಣ್ಣಿನಲ್ಲಿ ಬುಧವಾರ ಸಂಜೆ 40 ಗಂಟೆ ವೇಳೆಯಲ್ಲಿ ಹುಲಿ ಹೆಜ್ಜೆ ಗುರುತುಗಳು ಕಂಡುಬಂದಿವೆ. ಕೆಲವೇ ಸಮಯದಲ್ಲಿ ಹುಲಿ ಕಬ್ಬಿನ ಗದ್ದೆಯತ್ತ ಸಾಗುವುದನ್ನು ಕಂಡ ಮಾಲೀಕರು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದರು. ವಿಷಯ ತಿಳಿದ ಅಕ್ಕಪಕ್ಕದ ಜಮೀನುಗಳ ರೈತರು ಹಾಗೂ ಗ್ರಾಮಸ್ಥರು ಜಮೀನಿಗೆ ಧಾವಿಸಿದರು.
ಸಂಜೆ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಆಗಮಿಸಿ ಜನರನ್ನು ಹತ್ತಿರಕ್ಕೆ ಹೋಗದಂತೆ ನಿಯಂತ್ರಿಸಿ ಪಟಾಕಿ ಸಿಡಿಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಮುಖಂಡ ನಾಗಭೂಷಣ ಮಾತನಾಡಿ, ಈಗ ರೈತರು ಅರಿಷಿಣ ಕಟಾವು ಮಾಡಿದ್ದು ಬೆಳೆಗಳ ಕಾವಲಿಗೆ ಜಮೀನುಗಳಿಗೆ ಹೋಗಬೇಕಾಗಿದೆ. ಆದರೆ ಇಷ್ಟು ದಿನಗಳ ಕಾಲ ಕಾಡುಹಂದಿ ಹಾಗೂ ಚಿರತೆಗಳ ಭೀತಿಯಿಂದ ಹೋಗಲಾಗದಂತಾಗಿತ್ತು. ಆದರೆ ಈಗ ಹುಲಿಯೇ ಬಂದಿರುವುದು ರೈತರಿಗೆ ಇನ್ನೂ ಜೀವಭಯ ಹೆಚ್ಚಿಸಿದೆ. ಆದ್ದರಿಂದ ಕೂಡಲೇ ಹುಲಿ ಸೆರೆ ಹಿಡಿದು ಕಾಡಿಗೆ ಬಿಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಚಾಮರಾಜನಗರ ವಲಯದ ಆರ್‍ಎಫ್‍ಒ ಉಮೇಶ್ ಮಾತನಾಡಿ, ಹೆಜ್ಜೆ ಗುರುತು ಕಂಡುಬಂದ ಕಬ್ಬಿನ ತೋಟವನ್ನು ಸಿಬ್ಬಂದಿಗಳು ಕೂಂಬಿಂಗ್ ನಡೆಸಿದರೂ ಹುಲಿ ಕಂಡುಬಂದಿಲ್ಲ. ಜನರ ಗದ್ದಲದಿಂದ ಬೇರೆಡೆಗೆ ತೆರಳಿರುವ ಸಂಭವವಿದ್ದರೂ ಆದರೂ ಅದರ ಚಲನವಲನ ಪತ್ತೆಹಚ್ಚಲು ಎರಡು ಕ್ಯಾಮೆರಾಗಳನ್ನು ಅಳವಡಿಸಿ ರಾತ್ರಿ ಕಾವಲಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.