
ಕಲಬುರಗಿ:ಮೇ.23: ಅಂಗಡಿ, ಮುಂಗಟ್ಟುಗಳ ಮುಂದಿನ ಮಾರಾಟದ ವಸ್ತುಗಳನ್ನು ಹಠಾತ್ತನೇ ತೆರವುಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ನಗರದ ಕಿರಾಣಾ ಬಜಾರ್ ವರ್ತಕರು ಚೌಕ್ ಠಾಣೆ ವೃತ್ತದ ಬಳಿ ಮಂಗಳವಾರ ಮಿಂಚಿನ ರಸ್ತೆ ತಡೆ ಚಳುವಳಿ ಮಾಡಿದರು.
ನೂರಾರು ವರ್ತಕರು ಸಂಚಾರಿ ಠಾಣೆಯ ಪೋಲಿಸರು ಮತ್ತು ಮಹಾನಗರ ಪಾಲಿಕೆಯ ಸಿಬ್ಬಂದಿಗಳ ಕಿರುಕುಳವನ್ನು ವಿರೋಧಿಸಿ ಆಕ್ರೋಶ ಹೊರಹಾಕಿದರು. ಯಾವುದೇ ನೋಟಿಸ್ ನೀಡದೇ ಹಾಗೂ ಯಾವುದೇ ಮಾಹಿತಿ ಕೊಡದೇ ಅಂಗಡಿ, ಮುಂಗಟ್ಟುಗಳ ಮುಂದೆ ಇಟ್ಟಿದ್ದ ವಸ್ತುಗಳನ್ನು ಮಹಾನಗರ ಪಾಲಿಕೆಯ ಸಿಬ್ಬಂದಿಗಳು ತೆಗೆದುಕೊಂಡು ಹೋಗಿದ್ದಾರೆ ಎಂದು ಅವರು ತೀವ್ರ ಅಸಮಾಧಾನ ಹೊರಹಾಕಿದರು.
ರಸ್ತೆ ಅಗಲೀಕರಣದ ಹೆಸರಿನಲ್ಲಿ ಹಾಗೂ ಪಾದಾಚಾರಿ ರಸ್ತೆಗಾಗಿ ವರ್ತಕರಿಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ. ಇದರಿಂದಾಗಿ ವ್ಯಾಪಾರಿಗಳು ಸಾಕಷ್ಟು ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ ವರ್ತಕರು, ನಮ್ಮ ಪ್ರದೇಶದಲ್ಲಿ ಮಾತ್ರ ಸುಗಮ ಸಂಚಾರಕ್ಕೆ ಅಡೆತಡೆಯಾಗುತ್ತಿದೆಯೇ, ಬೇರೆ ಮಾರುಕಟ್ಟೆ ಪ್ರದೇಶದಲ್ಲಿ ಯಾವುದೇ ರೀತಿಯಲ್ಲಿ ತೊಂದರೆ ಇಲ್ಲವೆ? ಎಂದು ಪ್ರಶ್ನಿಸಿದರು.
ಬಾಂಡೇ ಬಜಾರ್, ಚಪ್ಪಲ್ ಬಜಾರ್ ಮುಂತಾದ ಪ್ರದೇಶಗಳಲ್ಲಿ ಇಕ್ಕಟ್ಟಾದ ರಸ್ತೆ ಮೇಲೆ ವ್ಯಾಪಾರ ಮಾಡಲಾಗುತ್ತಿದೆ. ವಾಹನಗಳ ಸಂಚಾರಕ್ಕೂ, ಅದರಲ್ಲಿಯೂ ದ್ವಿಚಕ್ರವಾಹನಗಳ ಸಂಚಾರಕ್ಕೂ ಸಹ ಅಂತಹ ಸ್ಥಳದಲ್ಲಿ ಅವಕಾಶ ಸಿಗುವುದಿಲ್ಲ. ಜನಸಂದಣಿಯ ಮಧ್ಯೆಯೂ ವಾಹನಗಳ ಸಂಚಾರ ಆಗುತ್ತಿದೆ. ಅಲ್ಲಿ ಯಾಕೆ ವರ್ತಕರಿಗೆ ತೆರವುಗೊಳಿಸುತ್ತಿಲ್ಲ. ನಮಗೆ ಒಂದು ನೀತಿ, ಮತ್ತೊಬ್ಬರಿಗೆ ಮತ್ತೊಂದು ನೀತಿಯೇ ಎಂದು ಅವರು ಕೇಳಿದರು.
ಕಿರಣಾ ಬಜಾರ್ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಿರಾಣಿ ವರ್ತಕರೇ ಇದ್ದಾರೆ. ಅವರು ತಮ್ಮ ಮಾರಾಟದ ಮಾದರಿ ವಸ್ತುಗಳನ್ನು ಅಂಗಡಿಯ ಮುಂದೆ ಇಟ್ಟಿರುತ್ತಾರೆ. ಅದರಿಂದ ಗ್ರಾಹಕರಿಗೆ ತಮಗೆ ಬೇಕಾದ ವಸ್ತುಗಳು ಸಿಗುತ್ತವೆ ಎಂಬ ಭರವಸೆಯನ್ನು ಹುಟ್ಟಿಸುತ್ತವೆ. ಅಂಗಡಿಯ ಮುಂದೆ ಸಾಮಾನುಗಳನ್ನು ಇಟ್ಟಾಗಲೇ ಖರೀದಿ ಆಗುತ್ತವೆ. ಅಂತಹ ಅಂಗಡಿ ಮುಂಗಟ್ಟುಗಳ ಮುಂದೆ ಇಟ್ಟ ಮಾರಾಟದ ವಸ್ತುಗಳನ್ನು ಪಾಲಿಕೆಯ ಸಿಬ್ಬಂದಿಗಳು ತೆಗೆದುಕೊಂಡು ಹೋಗಿದ್ದಾರೆ ಎಂದು ಅವರು ಆರೋಪಿಸಿದರು.
ಅಂಗಡಿಯ ಮುಂದೆ ವಿದ್ಯುತ್ ಕಂಬಗಳಿವೆ. ಅಂತಹ ಸ್ಥಳದಲ್ಲಿ ವಾಹನಗಳ ಸಂಚಾರ ಸಾಧ್ಯವಿಲ್ಲ. ಅಂತಹ ಸ್ಥಳದಲ್ಲಿ ವರ್ತಕರು ಸಾಮಾನುಗಳನ್ನು ಇಟ್ಟರೂ ಸಹ ಸಂಚಾರಿ ಠಾಣೆ ಪೋಲಿಸರು ಕಿರುಕುಳ ಕೊಡುತ್ತಾರೆ. ವಾಹನಗಳ ಸಂಚಾರಕ್ಕೂ, ವಾಣಿಜ್ಯಕ ವಸ್ತುಗಳಿಗೂ ಯಾವುದೇ ಸಂಬಂಧ ಇರದಿದ್ದರೂ ವರ್ತಕರಿಗೆ ಕಿರುಕುಳ ಕೊಡಲಾಗುತ್ತಿದೆ ಎಂದು ಅವರು ದೂರಿದರು.
ದಿನನಿತ್ಯ ಲಕ್ಷಾಂತರ ರೂ.ಗಳನ್ನು ಮಹಾನಗರ ಪಾಲಿಕೆಯ ಸಿಬ್ಬಂದಿಗಳು ವರ್ತಕರಿಂದ ಪಡೆಯುತ್ತಾರೆ. ಆದಾಗ್ಯೂ, ಅವರಿಗೆ ಮೂಲಭೂತ ಸೌಲಭ್ಯಗಳನ್ನು ಮಹಾನಗರ ಪಾಲಿಕೆ ಒದಗಿಸಿಲ್ಲ. ಕುಡಿಯುವ ಶುದ್ಧ ನೀರಿನ ಘಟಕ, ಶೌಚಾಲಯದ ವ್ಯವಸ್ಥೆ ಇಲ್ಲ. ಮಾಡಬೇಕಾದ ಕೆಲಸವನ್ನು ಮಾಡದೇ ವರ್ತಕರಿಗೆ ಇಲ್ಲದ ತೊಂದರೆಯನ್ನು ಮಹಾನಗರ ಪಾಲಿಕೆ ಮತ್ತು ಸಂಚಾರಿ ಠಾಣೆಯ ಪೋಲಿಸರು ಕೊಡುತ್ತಿದ್ದಾರೆ. ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.