ಕಲಬುರಗಿ,ಜು.28-ಕಿರುಕುಳ ತಾಳದೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ದುಬೈ ಕಾಲೋನಿಯ ಸಂಜಯ ಗಾಂಧಿ ನಗರದ ನಂದೀಶ ಶಿವಾನಂದಯ್ಯ ಹಿರೇಮಠ (17) ಎಂಬ ವಿದ್ಯಾರ್ಥಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ನಂದೀಶ ಮನೆಯಲ್ಲಿ ಯಾರ ಗಮನಕ್ಕೆ ತರದೆ 7 ಗ್ರಾಂ.ಬಂಗಾರವನ್ನು ತೆಗೆದುಕೊಂಡು ಹೋಗಿ ಸಂತೋಷ ಕಾಮನಳ್ಳಿ ಎಂಬಾತನಿಗೆ ಕೊಟ್ಟಿದ್ದು, ಸಂತೋಷ ಕಾಮನಳ್ಳಿ ಈ ಆಭರಣ ಮಾರಿ ನಂದೀಶಗೆ 10 ಸಾವಿರ ರೂ.ನೀಡಿದ್ದಾನೆ. ಈ ಹಣದಲ್ಲಿ ನಂದೀಶ ಮೊಬೈಲ್ ಖರೀದಿಸಿದ್ದು, ನಂದೀಶ ಬಳಿ ಮೊಬೈಲ್ ನೋಡಿದ ಆತನ ಪಾಲಕರು ವಿಚಾರಿಸಿದಾಗ ಮನೆಯಲ್ಲಿದ್ದ ಬಂಗಾರ ತೆಗೆದುಕೊಂಡು ಹೋಗಿ ಸಂತೋಷ ಕಾಮನಳ್ಳಿಗೆ ಕೊಟ್ಟಿದ್ದಾಗಿ ಆತ ಅದನ್ನು ಮಾರಿ ತನಗೆ 10 ಸಾವಿರ ರೂ.ನೀಡಿದ್ದಾಗಿ ಆ ಹಣದಲ್ಲಿ ಮೊಬೈಲ್ ಖರೀದಿಸಿದ್ದಾಗಿ ತಿಳಿಸಿದ್ದಾನೆ. ಈ ಬಗ್ಗೆ ನಂದೀಶ ತಂದೆ ಸಂತೋಷ ಕಾಮನಳ್ಳಿಯನ್ನು ವಿಚಾರಿಸಿ ಬಂಗಾರದ ಆಭರಣ ಮಾರಿದ ಮೇಲೆ ಇನ್ನುಳಿದ ಮೇಲಿನ ಹಣ ನೀಡುವಂತೆ ಕೇಳಿದ್ದಾರೆ. ಆಗ ಸಂತೋಷ ಮೇಲಿನ ಹಣ ಎಲ್ಲಿಂದ ಬರುತ್ತೆ, ಬರುವುದಿಲ್ಲ ಎಂದಿದ್ದಾನೆ. ಇದಾದ ನಂತರ ಸಂತೋಷ ನಂದೀಶಗೆ ನಿಮ್ಮ ತಂದೆ ಹಣ ಕೇಳುತ್ತಿದ್ದಾರೆ ಅವರಿಗೆ ನಾನು ಹಣ ವಾಪಸ್ ಕೊಡುತ್ತೇನೆ, ನಾನು ನಿನಗೆ ಕೊಟ್ಟ 10 ಸಾವಿರ ರೂ.ವಾಪಸ್ ಕೊಡಬೇಕು ಇಲ್ಲದಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಕಿರುಕುಳ ತಾಳದೆ ನಂದೀಶ ಮನೆಯಲ್ಲಿನ ಬಾತ್ ರೂಮಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ನಂದೀಶ ಆತ್ಮಹತ್ಯೆಗೆ ಸಂತೋಷ ಕಾಮನಳ್ಳಿ ಮತ್ತು ಅವರ ತಂದೆ ಕಾಂತಪ್ಪ ಕಾಮನಳ್ಳಿ ಅವರೇ ಕಾರಣೀಕರ್ತರಾಗಿದ್ದು, ಅವರ ವಿರುದ್ಧ ಕಾನೂನಾರಿತ್ಯ ಕ್ರಮ ಜರುಗಿಸಬೇಕು ಎಂದು ನಂದೀಶ ತಂದೆ ಶಿವಾನಂದಯ್ಯ ಹಿರೇಮಠ ಅವರು ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.