ಕಿರಿಯ ಮೂಕಪ್ಪಶ್ರೀಗಳ ಲಿಂಗಧಾರಣೆ

ಬ್ಯಾಡಗಿ, ಮಾ 26: ತಾಲೂಕಿನ ಸುಕ್ಷೇತ್ರ ಗುಡ್ಡದಮಲ್ಲಾಪುರ ಗ್ರಾಮದ ಸಂಸ್ಥಾನ ದಾಸೋಹಮಠದ ಕಿರಿಯ ಮೂಕಪ್ಪಶ್ರೀಗಳ ಲಿಂಗಧಾರಣೆ ಧಾರ್ಮಿಕ ಕಾರ್ಯಕ್ರಮವು ಹಾವೇರಿ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ಗುರುವಾರ ಶಾಸ್ತ್ರೋಕ್ತವಾಗಿ ನಡೆಯಿತು.
ಹಾವೇರಿ ತಾಲೂಕಿನ ಕಬ್ಬೂರು ಗ್ರಾಮದ ನಾಗರಾಜಪ್ಪ ಮತ್ತಿಹಳ್ಳಿ ಎಂಬುವರ ಮನೆಯಲ್ಲಿ ಗುಡ್ಡದಮಲ್ಲಾಪುರ ದಾಸೋಹಮಠದ ಷ.ಬ್ರ.ಮೂಕಪ್ಪಶ್ರೀಗಳು ಕಳೆದ ಒಂದು ವಾರದ ಹಿಂದೆ ಪುನರ್ಜನ್ಮ ತಾಳಿದ್ದರು. ನೂತನವಾಗಿ ಪುನರ್ಜನ್ಮ ಪಡೆದ ಶ್ರೀಗಳಿಗೆ ಸಾಂಪ್ರದಾಯಿಕವಾಗಿ ಶ್ರೀಮಠದ ವತಿಯಿಂದ ನಡೆದ ಲಿಂಗಧಾರಣೆ ಧಾರ್ಮಿಕ ಕಾರ್ಯಕ್ರಮವನ್ನು ತೊಗರ್ಸಿಯ ಮಳೆಮಠದ ಷ.ಬ್ರ. ಮಹಾಂತದೇಶಿಕೇಂದ್ರ ಶ್ರೀಗಳು ನೆರವೇರಿಸಿದರು. ಕಳೆದ ವರ್ಷ ಮಾರ್ಚ ತಿಂಗಳಲ್ಲಿ ಕಿರಿಯ ಮೂಕಪ್ಪಶ್ರೀಗಳು ಲಿಂಗೈಕ್ಯರಾಗಿದ್ದರಿಂದ ಒಬ್ಬರೇ ಶ್ರೀಗಳು ಮಠದ ಧಾರ್ಮಿಕ ಕಾರ್ಯವನ್ನು ಮುನ್ನಡೆಸುತ್ತಾ ಬಂದಿದ್ದರು. ನೂತನ ಶ್ರೀಗಳ ಪುನರ್ಜನ್ಮದಿಂದ ಭಕ್ತರಲ್ಲಿ ಭಕ್ತಿಯ ಸಂತಸ ತಂದಿದೆ.
ಈ ಸಂದರ್ಭದಲ್ಲಿ ದಾಸೋಹಮಠದ ಧರ್ಮಾಧಿಕಾರಿ ವೇ.ಮೂ. ಹುಚ್ಚಯ್ಯಸ್ವಾಮಿಗಳು, ವೈದಿಕ ಪಂಡಿತ ಕುಮಾರಸ್ವಾಮಿ ಹಿರೇಮಠ, ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ, ತಾಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶಾಂತಪ್ಪ ದೊಡ್ಡಮನಿ, ಗ್ರಾ.ಪಂ.ಸದಸ್ಯ ಕುಬೇರಪ್ಪ ನೆಲ್ಲಿಕೊಪ್ಪ, ಗ್ರಾಮಸ್ಥರಾದ ಮಂಜನಗೌಡ್ರ ಲಿಂಗನಗೌಡ್ರ, ಉಳಿವೆಪ್ಪ ಬೊಳೇರ, ಮೂಕಣ್ಣ ನರೇಗಲ್ಲ, ಮುತ್ತಣ್ಣ ಜಾಲಿಹಾಳ, ಧರ್ಮರಾಜ ದಾಸೋಹಮಠ ಉಪಸ್ಥಿತರಿದ್ದರು.