
ಕಲಬುರಗಿ: ಅ.24:ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ ದೊರೆಕಿಸಿಕೊಡುವಲ್ಲಿ, ಸಾಮಾಜಿಕ ನ್ಯಾಯಕ್ಕಾಗಿ, ಮಾನವೀಯ, ನೈತಿಕ ಮೌಲ್ಯಗಳ ರಕ್ಷಣೆಗಾಗಿ, ದೇಶದ ಸ್ವಾತಂತ್ರದ ಅಪ್ರತಿಮ ಹೋರಾಟಗಾರ್ತಿಯಾಗಿ ಬಲಿದಾನವಾದ ವೀರ ಮಹಿಳೆ ಕಿತ್ತೂರ ರಾಣಿ ಚನ್ನಮ್ಮಳ ಶೌರ್ಯ, ತ್ಯಾಗ, ಸ್ವಾಭಿಮಾನ, ದೇಶಪ್ರೇಮ, ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ಮಹಾಗಾಂವ ಕ್ರಾಸ್‍ನಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ‘ವೀರಮಾತೆ ಕಿತ್ತೂರ ರಾಣಿ ಚನ್ನಮ್ಮ ಅವರ 245ನೇ ಜಯಂತಿ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಕಸಾಪ ಕಲಬುರಗಿ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ ಮಾತನಾಡಿ, ಚನ್ನಮ್ಮ ಅವರು ಮಹಿಳೆಯರಿಗೆ ಆದರ್ಶವಾಗಿದ್ದಾರೆ. ನಮ್ಮ ನಾಡಿನ ಹೆಮ್ಮೆಯ ಧೀರ ಮಹಿಳೆಯಾಗಿ ದೇಶದ ಸ್ವಾತಂತ್ರ್ಯಕ್ಕೆ ನೀಡಿದ ಅಮೂಲ್ಯವಾದ ಕೊಡುಗೆಯ ಮೂಲಕ ಸಮಸ್ತ ಕನ್ನಡಿಗರೆಲ್ಲರು ಹೆಮ್ಮೆಪಡುವಂತಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮಲ್ಲಮ್ಮ ಉಡಬಾಳ್, ವೀರಮ್ಮ ಉಡಬಾಳ್, ಪ್ರಭುಲಿಂಗ ದಿಗ್ಗಾಂ, ಸಿದ್ದು ತಡಕಲ್, ಅಮೃತ ಡಬರಾಬಾದ್ ಸೇರಿದಂತೆ ಮತ್ತಿತರರಿದ್ದರು.