ಕಿತ್ತೂರ ಬಂದ್ ಯಶಸ್ವಿ

ಚನ್ನಮ್ಮನ ಕಿತ್ತೂರ, ಆ 3: ಐತಿಹಾಸಿಕ ಚನ್ನಮ್ಮನ ಕಿತ್ತೂರ ಮಾದರಿ ಕೋಟೆ ನಿರ್ಮಾಣ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಕರೆಯಲಾಗಿದ್ದ ಕಿತ್ತೂರ ಪಟ್ಟಣ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಪಟ್ಟಣದಲ್ಲಿ ವ್ಯವಹಾರ ವಹಿವಾಟುಗಳನ್ನು ಬಂದ್ ಮಾಡುವ ಮೂಲಕ ಬಂದ್ ಯಶಸ್ವಿಯಾಯಿತು. ಪೆಟ್ರೋಲ್ ಬಂಕ್, ಆಸ್ಪತ್ರೆ, ಬ್ಯಾಂಕ್ ಹಾಗೂ ಹಾಲಿನ ಅಂಗಡಿ ಹೊರತುಪಡಿಸಿ ಎಲ್ಲ ಅಂಗಡಿಗಳನ್ನು ಬಂದ್ ಮಾಡಿ, ಬಂದ್ ಶಾಂತಿಯುವಾಗಿ ನಡೆಯಿತು.
ಪ.ಪಂ.ಯಿಂದ ಆರಂಭಗೊಂಡ ಪ್ರತಿಭಟನೆ ಪಟ್ಟಣದ ಪ್ರಮುಖ ಓಣಿಗಳಲ್ಲಿ ಆಗಮಿಸಿತು. ನಂತರ ಚನ್ನಮ್ಮಾಜೀ ಪುತ್ಥಳಿ ಹತ್ತಿರ ಆಗಮಿಸಿ ಪ್ರತಿಭಟನಾಕಾರರು ಚನ್ನಮ್ಮಾಜೀ ಹಾಗೂ ವೀರ ಮಹನೀಯರ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮಿಜೀ ಅವರು, ಕಿತ್ತೂರ ಬೆಳಕಿಗೆ ಬಂದದ್ದು ಚನ್ನಮ್ಮಾಜೀಯಿಂದಲೇ. ಕಿತ್ತೂರಿನಲ್ಲಿ ಹಳೆಯ ಕೋಟೆ ಇದ್ದರೂ ಸಹ ಸರ್ಕಾರ ಮಾದರಿ ಕೋಟೆ ನಿರ್ಮಾಣಕ್ಕೆ ತಾಲೂಕಿನ ಬಚ್ಚನಕೇರಿಯಲ್ಲಿ ಜಾಗೆ ಗುರುತಿಸಿದ್ದು ಎಲ್ಲರಿಗೆ ನೋವಿನ ಸಂಗತಿಯಾಗಿದೆ. ನಾಡಿನ ಜನತೆ ಸ್ವಾಭಿಮಾನಕ್ಕೆ ಸರ್ಕಾರ ಧಕ್ಕೆ ಉಂಟು ಮಾಡಿದರೆ ಉಗ್ರ ಹೋರಾಟ ಮಾಡುವ ಸಂದರ್ಭ ಬಂದೊದಗುತ್ತದೆ. ಆದ್ದರಿಂದ ಸರ್ಕಾರ ಮಾದರಿ ಕೋಟೆ ಕಿತ್ತೂರ ಪಟ್ಟಣದಲ್ಲಿ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದವರು. ಈ ವಿಷಯಕ್ಕೆ ಸಬಂಧಿಸಿದಂತೆ ಸಾರ್ವಜನಿಕರೊಂದಿಗೆ ಬೆಳಗಾವಿ ಜಿಲ್ಲಾಧಿಕಾರಿ ಕಛೇರಿ ತೆರಳಿ ಆಕ್ಷೇಪಣೆ ಸಲ್ಲಿಸಲಿದ್ದೇವೆ ಎಂದರು.
ಕಾಂಗ್ರೇಸ್ ಮುಖಂಡರುಗಳಾದ ಬಾಬಾಸಾಹೇಬ ಪಾಟೀಲ, ನಿಂಗಪ್ಪ ತಡಖೋಡ, ಹಬೀಬ ಶಿಲ್ಲೇದಾರ, ಮಾಜಿ ಪ.ಪಂ. ಅಧ್ಯಕ್ಷ ಹನೀಪ್ ಸುತ್ತಗಟ್ಟಿ, ಪ.ಪಂ. ಸದಸ್ಯರುಗಳಾದ ಸಿದ್ದಣ್ಣಾ ಮಾರಹಾಳ, ಶಂಕರ ಬಡಿಗೇರ, ಎಂ.ಎಫ್.ಜಕಾತಿ, ಗ್ರಾ.ಪಂ. ಅಧೈಕ್ಷ ಭೀಷ್ಟಪ್ಪ ಶಿಂಧೆ, ಸಚಿನ್ ಮಾರಿಹಾಳ, ವಿಜಯಕುಮಾರ ಶಿಂಧೆ ,ಪುಂಡಲೀಕ ನೀರಲಕಟ್ಟಿ, ಹಾಲಿ ಮಾಜಿ ಪ.ಪಂ. ಸದಸ್ಯರು ಸೇರಿದಂತೆ ಸಾರ್ವಜನಿಕರಿದ್ದರು.