ಕಿತ್ತೂರ ತಾಲೂಕ ಬರಪೀಡಿತವೆಂದು ಘೋಷಿಸಲು ಒತ್ತಾಯ

ಚನ್ನಮ್ಮನ ಕಿತ್ತೂರ,ಜು7: ಸಮಯಕ್ಕೆ ಸರಿಯಾಗಿ ಮಳೆಯಾಗದ ಕಾರಣ ಮುಂಗಾರಿನ ಬೆಳೆಗಳು ಹಾಳಾಗಿವೆ. ರೈತನು ಸಂಕಷ್ಟದಲ್ಲಿದ್ದಾರೆ. ಎಂದು ಸ್ವಾಭಿಮಾನಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೀರಪ್ಪ ದೇಶನೂರ ಹೇಳಿದರು.
ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಂಗಾರಿನ ಮಳೆ ಅವಲಂಬಿಸಿ ಭತ್ತ, ಹತ್ತಿ ಸೋಯಾಬಿನ್, ಹೆಸರು, ಮೆಕ್ಕೆಜೋಳ, ಸೇರಿದಂತೆ ಇನ್ನಿತರ ತೋಟಗಾರಿಕೆಯ ಬೀಜಗಳನ್ನು ಬಿತ್ತನೆ ಮಾಡಿರುತ್ತಾರೆ. ಆದರೆ ಬಿತ್ತಿದ ಬೀಜ ಮೊಳಕೆಯೊಡೆಯದೇ ಕಮರಿವೆ.
ರೈತರು ಬೀಜ ರಸಗೊಬ್ಬರಕ್ಕೆ ಬ್ಯಾಂಕಗಳಲ್ಲಿ ಸಾಲ ಪಡೆದು ಸಾಕಷ್ಟು ಹಣ ಖರ್ಚುಮಾಡಿ ಕೈಸುಟ್ಟುಕೊಂಡಿದ್ದಾರೆ.
ಜಾನುವಾರುಗಳಿಗೆ ಮೇವಿನ ಆಭಾವ ಮತ್ತು ಕುಡಿಯುವ ನೀರಿನ ಕೊರತೆ ಏಳುವ ಸಾಧ್ಯತೆಯಿದೆ. ಕಾರಣ ವಾಸ್ತವಿಕ ಅಂಶಗಳನ್ನು ಗಮನಿ ಈ ಕೂಡಲೇ ಸರ್ಕಾರ ಕಿತ್ತೂರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಸರ್ಕಾರವನ್ನೆಚ್ಚರಿಸಿದರು.
ಅದಲ್ಲದೇ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಈಗಿನ ಖರ್ಚು ವೆಚ್ಚದ ಪರಿಸ್ಥಿತಿಯಲ್ಲಿ 1 ಲಕ್ಷ ರೂ. ಪರಿಹಾರ ಘೋಷಿಸಿ ಅವರ ಸಾಲ ಮನ್ನಾ ಮಾಡುವ ಕಡೆಗೆ ಸರ್ಕಾರ ಗಮನ ಹರಿಸಬೇಕು. ಇಲ್ಲದಿದ್ದರೇ ರೈತರು ಆತ್ಮಹತ್ಯೆಗೆ ಶರಣಾಗುವುದು ಖಚಿತ. ಆದ್ದರಿಂದ ಕ್ಷೇತ್ರದ ರೈತರ ಪರವಾಗಿ ನೂತನ ಶಾಸಕ ಬಾಬಾಸಾಹೇಬ ಪಾಟೀಲ ಮುತವರ್ಜಿ ವಹಿಸಿ ರೈತರ ಹಿತ ಕಾಪಾಡುವಲ್ಲಿ ಮುಂದಾಗಿ ಸರ್ಕಾರ ಗಮನ ಸೆಳೆದು ತಾಲೂಕನ್ನು ಬರಪೀಡಿತವೆಂದು ಘೋಷಿಸಬೇಕೆಂದು ಅವರು ಒತ್ತಾಯಿಸಿದರು.
ಈ ವೇಳೆ ರಾಜ್ಯಾಧ್ಯಕ್ಷ ಶಿವನಸಿಂಗ ಮೊಕಾಶಿ, ರೈತ ಮುಖಂಡರುಗಳಾದ ಮಾರುತಿ ಕಮತಗಿ, ರಾಜು ತೊಲಗಿ, ಶಿವಾನಂದ ಜ್ಯೋತಿ, ಭೀಮಪ್ಪ ಸವಟಗಿ, ಮಹಾಂತೇಶ ಬೋಗೂರ, ನಾಗೇಶ ಸುಳೇಭಾವಿ, ವಿಶ್ವನಾಥ ಹಿಟ್ಟಿನ, ಈಶ್ವರ ಬೀಡಿ, ವೆಂಕನಗೌಡ ಪಾಟೀಲ, ಮಲ್ಲಿಕಾರ್ಜುನ ಜುಟ್ಟನವರ, ಅಶೋಕ ಕಳಸಣ್ಣವರ, ಬಸವರಾಜ ಇತರಿದ್ದರು.