ಕಿತ್ತೂರ ಉತ್ಸವ ದೇಶಪ್ರೇಮಕ್ಕೆ ಸ್ಪೂರ್ತಿಯಾಗಬೇಕು

ಚನ್ನಮ್ಮನ ಕಿತ್ತೂರ,ಅ26: 200 ವರ್ಷಗಳ ಹಿಂದೆ ಆಂಗ್ಲರನ್ನು ಮಂಡಿಯೂರಿಸಿದ ಪ್ರಥಮ ವೀರಮಹಿಳೆ ಕಿತ್ತೂರು ಚನ್ನಮ್ಮ. ಈ ವೀರಭೂಮಿಯಲ್ಲಿ ಸಹಸ್ರಾರು ವೀರಮಹಿಳೆಯರು ಹುಟ್ಟಬೇಕು. ಕಿತ್ತೂರು ನೆಲದ ಜನರು ಚನ್ನಮ್ಮನ ಹೋರಾಟದ ಛಲವನ್ನು ರೂಢಿಸಿಕೊಳ್ಳಬೇಕು ಮಹಿಳೆಯರು ಏನೆಲ್ಲಾ ಸಾಧಿಸಬಹುದು ಎನ್ನುವುದಕ್ಕೆ ಚನ್ನಮ್ಮಳೆ ನಿದರ್ಶನ ಎಂದು ಚಿತ್ರನಟ ರಮೇಶ್ ಅರವಿಂದ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚನ್ಮಮ್ಮನ ಕಿತ್ತೂರಿನ ಕೋಟೆ ಅಂಗಳದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೂರು ದಿನಗಳ ರಾಜ್ಯಮಟ್ಟದ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ನುಡಿಗಳನ್ನಾಡಿದರು.
ಕಿತ್ತೂರು ಉತ್ಸವ ಮನರಂಜನೆಗೆ ಸೀಮಿತವಾಗಬಾರದು. ಉತ್ಸವವು ದೇಶಪ್ರೇಮಕ್ಕೆ ಸ್ಫೂರ್ತಿಯಾಗಬೇಕು. ಜಗತ್ತನ್ನು ಆಳುತ್ತಿದ್ದ ಆಂಗ್ಲರನ್ನು ಎದುರಿಸಿದ ದಿಟ್ಟ ಮಹಿಳೆ ಚನ್ನಮ್ಮಳನ್ನು ನಾವು ಆದರ್ಶವಾಗಿಟ್ಟುಕೊಳ್ಳಬೇಕು ದೇಶದಲ್ಲಿ ಚನ್ನಮ್ಮಳಂತೆ ಎಲ್ಲರು ಆಗಬೇಕು ಎಂದರು.
ಇದೇ ವೇಳೆ ಮಾತನಾಡಿದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ಸಂಗೀತ ಸಮರಗಳನ್ನು ವಿರೋಧಿಸುತ್ತದೆ; ಸಮರದಿಂದಾದ ಗಾಯಗಳನ್ನು ನಿವಾರಿಸುತ್ತದೆ. ಕನ್ನಡ ಮತ್ತು ಸಂಗೀತವು ಸಾಮರಸ್ಯದ ಅಸ್ತ್ರಗಳಾಗಬೇಕು ಎಂದು ಹಂಸಲೇಖ ಅವರು ಆಶಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಬಾಬಾಸಾಹೇಬ್ ಪಾಟೀಲ, ಮುಂದಿನ ವರ್ಷ 200 ನೇ ವಿಜಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಕಿತ್ತೂರು ಕೋಟೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೂರು ದಿನಗಳ ರಾಜ್ಯಮಟ್ಟದ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಸಾನಿಧ್ಯ ವಹಿಸಿ ಮಾತನಾಡಿದ ಬೈಲೂರ ನಿಷ್ಕಲ ಮಂಟಪದ ನಿಜಗುಣ ತೋಂಟದಾರ್ಯ ಮಹಾಸ್ವಾಮಿಗಳು, ಉತ್ಸವದಲ್ಲಿ ಇತಿಹಾಸ, ವೈಚಾರಿಕತೆಯನ್ನು ಪರಿಚಯಿಸಬೇಕು. ಕಿತ್ತೂರಿನ ನೂತನ ತಾಲ್ಲೂಕು ಸೌಧದ ಎದುರು ಬಸವಣ್ಣ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನವರ ಪುತ್ಥಳಿ ಸ್ಥಾಪಿಸಬೇಕು ಎಂದು ಸರ್ಕಾರವನ್ನೊತ್ತಾಯಿಸಿದರು.
ನಿಚ್ಚಣಕಿ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮಿ ಅವರು, ಕಿತ್ತೂರಿನ ನೂತನ ತಾಲ್ಲೂಕು ಸೌಧದ ಎದುರು ಬಸವಣ್ಣ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನವರ ಪುತ್ಥಳಿ ಸ್ಥಾಪಿಸಬೇಕು ಎಂದರು.
ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮಿ, 200 ನೇ ವರ್ಷಾಚರಣೆ ದೇಶದ ಗಮನ ಸೆಳೆಯುವಂತಾಗಬೇಕು. ಇದಲ್ಲದೇ ರಾಣಿ ಚನ್ನಮ್ಮ ಪ್ರಶಸ್ತಿಯನ್ನು ಉತ್ಸವದ ಸಂದರ್ಭದಲ್ಲಿ ಪ್ರದಾನ ಮಾಡಬೇಕು ಎಂದು ಹೇಳಿದರು.
ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಕಾದರವಳ್ಳಿ ಸೀಮಿಮಠದ ಡಾ.ಫಾಲಾಕ್ಷ ಶಿವಯೋಗೀಶ್ವರ ದೇವರು.
ವಿಧಾನಪರಿಷತ್ ಸದಸ್ಯರಾದ ಹಣಮಂತ ನಿರಾಣಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ , ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ, ತಹಶೀಲ್ದಾರ ರವೀಂದ್ರ ಹಾದಿಮನಿ, ತಾ.ಪಂ.ಇಓ ಸುಬಾಸ್ ಸಂಪಗಾಂವಿ, ಆಹಾರ ಇಳಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಸೇರಿದಂತೆ ಕಿತ್ತೂರ- ಬೈಲಹೊಂಗಲ ತಾಲೂಕಾಧಿಕಾರಿಗಳು ಸಿಬ್ಬಂದಿ , ಪೆÇೀಲಿಸ್ ಇಲಾಖೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು.
ಮೂರು ದಿನಗಳ ಉತ್ಸವವು ರಾಣಿ ಚನ್ನಮ್ಮಳ ಶೌರ್ಯ, ಸಾಹಸಗಾಥೆಯನ್ನು ಅನಾವರಣಗೊಳಿಸುವುದರ ಜತೆಗೆ ಸಾಂಸ್ಕೃತಿಕ ವೈಭವವನ್ನು ಮೆರೆಯಿತು.
ಮೂರು ದಿನಗಳ ಕಾಲ ಸಾವಿರಾರು ಜನರು ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.