ಕಿತ್ತೂರು ರಾಣಿ ಚೆನ್ನಮ್ಮ‌ ನಾಟಕ ಪ್ರದರ್ಶನ

ಕಲಬುರಗಿ,ಸೆ.19:ಸ್ವಾತಂತ್ರ್ಯಕ್ಕಾಗಿ ಆಂಗ್ಲರ‌ ವಿರುದ್ಧ ಯುದ್ಧ ಸಾರಿದ‌ ವೀರ ರಾಣಿ ಕಿತ್ತೂರು ರಾಣಿ ಚೆನ್ನ‌ಮ್ಮ ಅವರ ಸಾಹಸ ಮತ್ತು ಶೌರ್ಯ ಬಿಂಬಿಸುವ “ಕಿತ್ತೂರು ರಾಣಿ ಚೆನ್ನಮ್ಮ” ನಾಟಕ ಪ್ರದರ್ಶನ ನಡೆಯಿತು.

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಅಂಗವಾಗಿ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಭಾನುವಾರದಿಂದ‌ ಒಂದು ವಾರಗಳ ಕಾಲ ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸೋಮವಾರದ ಈ ನಾಟಕ ಸಭಿಕರನ್ನು ಕೆಲ ಹೊತ್ತು ಮೂಕ ವಿಸ್ಮಿತವನ್ನಾಗಿಸಿತ್ತು.

ಧಾರವಾಡ ರಂಗಾಯಣದ‌ ಸುಮಾರು 20 ಕಲಾವಿದರಿಂದ ಬಂದ ಈ ನಾಟಕದಲ್ಲಿ ರಾಣಿ ಚೆನ್ನಮ್ಮನ ಶೌರ್ಯ, ಆಂಗ್ಲರ ಜೊತೆ ಗೂಡಿ ಕಿತ್ತೂರು ಸಂಸ್ಥಾನಕ್ಕೆ ದ್ರೋಹ‌ ಬಗೆದ ಮಲ್ಲಪ್ಪಗೌಡನ ಕುತಂತ್ರ‌ ನೀತಿ , ರಾಯಣ್ಣನ ಸಾಹಸ, ರಾಣಿ ಚೆನ್ನಮ್ಮನ ಸೆರೆವಾಸ ಹೀಗೆ ವಿವಿಧ ಘಟನೆಗಳು ಕಣ್ಮುಂದೆ ಬಂದವು.

ಕಲಬುರಗಿಯ ಡಾ. ಶುಭಾಂಗಿ ನೇತೃತ್ವದ ಓಂಕಾರ್ ನೃತ್ಯ ಸಾಧನಾ ತಂಡವು ದೇಶ ಪ್ರೇಮ ಹೆಚ್ಚಿಸುವ “ವಂದೇ ಮಾತರಂ” ಹಾಡಿಗೆ ಶಾಸ್ತ್ರೀಯ ನೃತ್ಯ ಪ್ರಸ್ತುತಪಡಿಸಿತು. ಬೆಂಗಳೂರಿನ ಅರಾಧನಾ ನೃತ್ಯ ಶಾಲೆಯ ನಾಗಭೂಷಣ ಮತ್ತು ತಂಡದಿಂದ ಮೂಡಿಬಂದ ನೃತ್ಯ ರೂಪಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.

ಹನುಮಣ್ಣ ನಾಯಕ ದೊರೆ ಇವರಿಂದ ಶಾಸ್ತ್ರೀಯ ಸಂಗೀತ, ಕಲಬುರಗಿಯ ಸೀಮಾ ಪಾಟೀಲ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ರವಿಕಿರಣ ನಾಕೊಡ ಇವರಿಂದ ತಬಲ ಸೊಲೊ, ಲಕ್ಷ್ಮೀಶಂಕರ ಜೋಶಿಯಿಂದ ದಾಸವಾಣಿ ಹಾಗೂ ಮಹೇಶ ಬಡಿಗೇರ್ ಇವರಿಂದ ಸುಗಮ ಸಂಗೀತ ನಡೆಯಿತು.

ನೂರಾರು ಸಂಖ್ಯೆಯಲ್ಲಿ ರಂಗಾಸಕ್ತರು, ಕಲಾ ಪ್ರೇಮಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.