ಕಿತ್ತೂರು ಅಭಿವೃದ್ಧಿಗೆ ಬದ್ಧ

ಚನ್ನಮ್ಮನ ಕಿತ್ತೂರ,ಮೇ29: ಸಚಿವ ಸಂಪುಟ ದರ್ಜೆಯ ಸಚಿವರಾಗಿ ಸಚಿವ ಸತೀಶ ಜಾರಕಿಹೊಳಿಯವರು ಪ್ರಪ್ರಥಮವಾಗಿ ಐತಿಹಾಸಿಕ ಚನ್ನಮ್ಮನ ಕಿತ್ತೂರಿಗೆ ಆಗಮಿಸಿದ ಸಂದರ್ಭದಲ್ಲಿ ಕಾರ್ಯಕರ್ತರು, ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿದರು.
ನಂತರ ಶಾಸಕ ಬಾಬಾಸಾಹೇಬ ಪಾಟೀಲ ಸಚಿವ ಸತೀಶ ಜಾರಕಿಹೊಳಿ ಜೊತೆಗೂಡಿ ಚನ್ನಮ್ಮಾಜೀ, ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪರವರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು. ಈ ಸ್ಥಳ ಐತಿಹಾಸಿಕ ಪುಣ್ಯ ಸ್ಥಳವಾಗಿದೆ. ಬ್ರಿಟಿಷರ ವಿರುದ್ಧ ಕಿಡಿ ಹೊತ್ತಿಸಿ ನಮಗೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟ ಚನ್ನಮ್ಮಾಜಿ. ಈ ಸ್ಥಳ ಮುಂದಿನ ದಿನಗಳಲ್ಲಿ ಸರ್ಕಾರದ ಅನೇಕ ಮೂಲಭೂತ ಸೌಕರ್ಯ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಮತ್ತು ಕ್ಷೇತ್ರದಲ್ಲಿ ಇನ್ಮುಂದೆ ಸಾಕಷ್ಟು ಪ್ರಗತಿಯನ್ನು ಕಾಣಲಿದೆ ಎಂದು ಹೇಳಿದರು.
ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನತೆಗೆ ನೀಡುವುದು ಪಕ್ಕಾ ಇದೆ ಎಂದು ಹೇಳಿದರು. ಕೊಟ್ಟ ಮಾತಿಗೆ ತಪ್ಪದ ಸರ್ಕಾರ ನಮ್ಮದು. ಅದನ್ನು ಗ್ಯಾರಂಟಿಯಾಗಿ ಈಡೇರಿಸುತ್ತದೆ ಎಂಬುವುದು ನನಗೆ ಆತ್ಮವಿಶ್ವಾಸವಿದೆ ಎಂದರು.
ಕಿತ್ತೂರ ಕ್ಷೇತ್ರದಲ್ಲಿ ರಸ್ತೆಗಳ ವಿಷಯವಾಗಿ ಮುಂಬರುವ ದಿನಗಳಲ್ಲಿ ಹಂತ-ಹಂತವಾಗಿ ಪ್ರಗತಿಯನ್ನು ಹೊಂದಲಿದೆ. ಸರ್ಕಾರದ ವತಿಯಿಂದ ಏನೆಲ್ಲಾ ಮಾಡಬಹುದೋ ಆ ಎಲ್ಲ ಕೆಲಸಗಳನ್ನು ಕ್ರಮೇಣವಾಗಿ ಕ್ಷೇತ್ರಕ್ಕೆ ಮಾಡುತ್ತೇನೆಂದು ಪತ್ರಕರ್ತರಿಗೆ ಉತ್ತರಿಸಿದರು.
ನಂತರ ಸಮೀಪದ ಬೈಲೂರ ನಿಷ್ಕಲ ಮಂಟಪಕ್ಕೆ ತೆರಳಿ ನಿಜಗುಣಾನಂದ ಶ್ರೀಗಳಿಂದ ಸಚಿವ ಜಾರಕಿಹೊಳಿ ಹಾಗೂ ಶಾಸಕ ಬಾಬಾಸಾಹೇಬ ಪಾಟೀಲರು ಆರ್ಶೀವಾದ ಪಡೆದರು. ಮಠದ ಶ್ರೀಗಳು ಅವರನ್ನು ಸತ್ಕರಿಸಿದರು.
ಈ ವೇಳೆ ಮಾಜಿ ಜಿ.ಪಂ. ಸದಸ್ಯರುಗಳಾದ ಶಂಕರ ಹೊಳಿ, ಶ್ರೀಮತಿ ರೋಹಿಣಿ ಪಾಟೀಲ, ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ, ಮುಖಂಡರುಗಳಾದ ಹಬೀಬ ಶಿಲ್ಲೇದಾರ, ಹನೀಪ್ ಸುತಗಟ್ಟಿ, ರಾಜಾಸಲೀಂ ಕಾಶೀಮ್‍ನವರ, ಅಶಪಾಕ ಹವಾಲ್ದಾರ, ಅನಿಲ್ ಎಮ್ಮಿ, ಮುದಕಪ್ಪ ಮರಡಿ, ಶಾಮ್ ಕಾಂದ್ರೋಳ್ಳಿ, ಕಿರಣ ವಾಳದ, ಶಿವನಸಿಂಗ ಮೊಕಾಶಿ, ಕೃಷ್ಣಾ ಬಾಳೇಕುಂದ್ರಿ, ಶಂಕರ ಬಡಿಗೇರ, ರಮೇಶ ಮೊಕಾಶಿ, ಬಸವರಾಜ ಸಂಗೋಳ್ಳಿ, ಉಮೇಶ ಶೆಟ್ಟರ್, ಬಸವರಾಜ ಚಿನಗುಡಿ, ಎಮ್.ಎಮ್. ರಾಜೀಬಾಯಿ, ಸೇರಿದಂತೆ ಹಲವರಿದ್ದರು.