ಕಿಡ್ನಿ ಕಸಿ ಚಿಕಿತ್ಸೆಗೆ ಚಾಲನೆ

ವಿಜಯಪುರ:ಮಾ.10: ಏಪ್ರಿಲ್ ಮೊದಲ ವಾರದಲ್ಲಿ ಬಿ. ಎಲ್. ಡಿ. ಇ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಚಿಕಿತ್ಸೆಗೆ ಚಾಲನೆ ನೀಡಲಾಗುವುದು ಎಂದು ಬಿ.ಎಲ್.ಡಿ.ಇ ಡೀನ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ ತಿಳಿಸಿದ್ದಾರೆ.
ನಗರದ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ನಡೆದ ವಿಶ್ವ ಕಿಡ್ನಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನುರಿತ ತಜ್ಞವೈದ್ಯರ ತಂಡ ಆಸ್ಪತ್ರೆಯಲ್ಲಿದ್ದು, ಮೊದಲ ಐದು ರೋಗಿಗಳಿಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ಅವರು ತಿಳಿಸಿದರು. ನೋವು ನಿವಾರಕ ಔಷಧಿ ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಬೇಕು:
ನೋವು ನಿವಾರಕ ಮತ್ತು ರೋಗ ನಿರೋಧಕ ಔಷಧಿಗಳನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಈ ಔಷಧಿಗಳಿಂದಲೂ ಕಿಡ್ನಿಗಳಿಗೆ ತೊಂದರೆಯಾಗುತ್ತಿದೆ.
ಹೊಟ್ಟೆಯ ಎಡ ಅಥವಾ ಬಲ ಭಾಗದಲ್ಲಿ ಅಸಹನೀಯ ನೋವು ಕಾಣಿಸಿದ್ದರೆ ಅದನ್ನು ನಿರ್ಲಕ್ಷಿಸದೇ ವೈದ್ಯರನ್ನು ಸಂಪರ್ಕಿಸಬೇಕು. ಮೂತ್ರಪಿಂಡ ಸಮಸ್ಯೆಯಿಂದಲೂ ಈ ರೀತಿ ನೋವು ಉಂಟಾಗುವ ಸಾಧ್ಯತೆಗಳಿರುತ್ತವೆ. ಇಂದಿನ ಜೀವನ ಶೈಲಿಯಲ್ಲಿ ಮಧುಮೇಹ ಮತ್ತು ರಕ್ತದೊತ್ತಡದಿಂದಲೂ ಕಿಡ್ನಿ ಸಂಬಂಧಿ ರೋಗಗಳು ಕಾಣಿಸಿಕೊಳ್ಳುತ್ತಿವೆ ಎಂದು ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಎಸ್. ಬಿ. ಪಾಟೀಲ, ಕಿಡ್ನಿ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡುವುದು ಪ್ರತಿಯೊಬ್ಬ ನಾಗರಿಕ ಮತ್ತು ಆರೋಗ್ಯ ಇಲಾಖೆ ಹಾಗೂ ಸಂಘ- ಸಂಸ್ಥೆಗಳ ಕರ್ತವ್ಯವಾಗಬೇಕು. ಶಸ್ತ್ರಚಿಕಿತ್ಸೆ ವಿಧಾನಗಳ ಕೊರತೆಯಿಂದ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಿ.ಎಲ್.ಡಿ.ಇ ಸೂಪರ್ ಸ್ಪೇಣಾಲಿಟಿ ಆಸ್ಪತ್ರೆ ಜನಜಾಗೃತಿ ಜಾಥಾ ಮತ್ತು ಕಾರ್ಯಾಗಾರ ಆಯೋಜಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿ. ಎಲ್. ಡಿ. ಇ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಯುರಾಲಾಜಿಸ್ಟ್ ಡಾ. ಸಂದೀಪ ಪಾಟೀಲ, ವೀರಣ್ಣ ಜುಮನಾಳಮಠ, ವೈದ್ಯಕೀಯ ವಿದ್ಯಾರ್ಥಿಗಳಾದ ಡಾ. ನವಾಜ, ಡಾ. ಮನೋಜ, ಡಾ. ವಿಕಾಸ, ಡಾ. ಕಿರಣ ನೇಗಿ, ಡಾ. ಗುಲಶ್ಯಾನ್, ಡಾ. ಧ್ರುವ, ಪ್ರೀತು ದಶವಂತ, ಶಿವನಗೌಡ, ಆಶ್ಮಾ ಪಟೇಲ, ಉಮೇಶ ಮುಧೋಳ, ಬಸವರಾಜ ಕುಂಬಾರ, ಭಾಗ್ಯಶ್ರೀ ಶಾಲಿನಿ ಮುಂತಾದವರು ಉಪಸ್ಥಿತರಿದ್ದರು.