ಕಿಡಿಗೇಡಿಗಳ ಗಡಿಪಾರಿಗೆ ಪ್ರತಿಭಟನೆ

ರಾಯಚೂರು, ಜ.೨೭-ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನಿಸಿದ ಕಿಡಿಗೇಡಿಗಳನ್ನು ಬಂಧಿಸಿ ದೇಶದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಭೀಮ್ ಆರ್ಮಿ ಮುಖಂಡರು ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಚೇರಿ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೂ ಪ್ರತಿಭಟನೆ ಮೆರವಣಿಗೆ ನಡೆಸಿದರು. ರಸ್ತೆ ಯುದ್ದಕ್ಕೂ ಜೈಭೀಮ್ ಘೋಷಣೆ ಮೊಳಗಿದವು. ಕೂಡಲೇ ಕಿಡಿಗೇಡಿಗಳಿಗೆ ಕಠಿಣ ಕ್ರಮ ಜರುಗಿಸಿ ಅವರನ್ನು ದೇಶದಿಂದ ಗಡಿಪಾರು ಮಾಡುವಂತೆ ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.
ಸಂಘ ಪರಿವಾರದ ಕೈವಾಡದಿಂದ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿದರು. ಅಂಬೇಡ್ಕರ್ ಚಪ್ಪಲಿ ಹಾರ ಹಾಕಿರುವುದು ಅಂಬೇಡ್ಕರ್ ಅನುಯಾಯಿಗಳಿಗೆ ಹಾಗೂ ಅಂಬೇಡ್ಕರ್ ವಾದಿಗಳಿಗೆ ನೋವು ಉಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನವರಿ ೨೨ ರಂದು ಕಲಬುರಗಿ ನಗರದ ಹೊರವಲಯದಲ್ಲಿರುವ ಕೋಟನೂರ (ಡಿ) ಗ್ರಾಮದಲ್ಲಿಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ಅಪಮಾನ ಮಾಡಲಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಿದವರ ವಿರುದ್ಧ ಕೂಡಲೇ ಸರಕಾರ ಕ್ರಮ ಕೈಗೊಂಡು ಇಂತಹ ಕೃತ್ಯಗಳನ್ನು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಎಲ್ಲಾ ಜಾತಿ, ಧರ್ಮ ಪಂತಗಳಿಗೆ ಯಾವುದೇ ರೀತಿಯ ತಾರತಮ್ಯ ಮಾಡದೇ ಭಾರತ ದೇಶದಲ್ಲಿ ಎಲ್ಲಾರು ಸಮಾನತೆ, ಸ್ವತಂತ್ರ ಸ್ವಾಭೀಮಾನದಿಂದ ಬದುಕಲು ಸಂವಿಧಾನ ರೂಪಿಸಿಕೊಟ್ಟಿರುವಂತಹ ವಿಶ್ವದ ಮಹಾ ನಾಯಕರಾಗಿರುವಂತಹ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಮೂರ್ತಿಗೆ ಅಪಮಾನಗೊಳಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರವೀಣಕುಮಾರ, ಸಿ. ದೀಪಕ್ ಬಂಡಾರಿ, ಬಾಬಾಖಾನ್ ಸೇರಿದಂತೆ ಉಪಸ್ಥಿತರಿದ್ದರು.